ನವದೆಹಲಿ: ತಾವು ಎನ್ಡಿಎ ತೊರೆಯುವ ವದಂತಿಗಳನ್ನು ತಳ್ಳಿ ಹಾಕಿರುವ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ, ಎನ್ಡಿಎ ಮೈತ್ರಿಕೂಟದೊಂದಿಗೆ ಅಚಲವಾಗಿ ಮುಂದುವರಿಯುವುದಾಗಿ ಮತ್ತು ತಾವು ಬದುಕಿರುವವರೆಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ರಾಜಕೀಯ ವಲಯದಲ್ಲಿ ಹರಿದಾಡಿದ ವದಂತಿಗಳ ಬಗ್ಗೆ ಮಾತನಾಡಿದ ಮಾಂಝಿ, "ನನ್ನ ವಿರುದ್ಧ ಯಾವುದೇ ಪಿತೂರಿ ನಡೆಸಲು ಸಾಧ್ಯವಿಲ್ಲ. ಯಾರಾದರೂ ಅಂತಹ ಪ್ರಯತ್ನ ಮಾಡಿದರೆ ಅವರು ವಿಫಲರಾಗಲಿದ್ದಾರೆ. ನನ್ನ ಪಕ್ಷವು ಕೇವಲ ಒಂದು ಸ್ಥಾನ ಗೆದ್ದಿದ್ದರೂ, ಎಂಎಸ್ಎಂಇ ಇಲಾಖೆಯ ಮುಖ್ಯಸ್ಥನ ಸ್ಥಾನ ಸೇರಿದಂತೆ ನನಗೆ ವಹಿಸಿದ ಜವಾಬ್ದಾರಿಗಳಿಗಾಗಿ ನಾನು ಪ್ರಧಾನಿ ಮೋದಿಯವರಿಗೆ ತುಂಬಾ ಕೃತಜ್ಞನಾಗಿದ್ದೇನೆ. ಈ ವಿಶ್ವಾಸ ಬಹಳ ದೊಡ್ಡದಾಗಿದೆ. ನಾವು ಬಡವರಾಗಿರಬಹುದು, ನಾವು ಅಪ್ರಾಮಾಣಿಕರಲ್ಲ" ಎಂದು ಅವರು ತಿಳಿಸಿದರು.
ಟಿಆರ್ಪಿ ಹೆಚ್ಚಿಸಿಕೊಳ್ಳಲು ಸುಳ್ಳು ಎಂದ ಮಾಂಝಿ: "ನಾನು ನಿಷ್ಠೆಯನ್ನು ನಂಬುವ ಪೀಳಿಗೆಯಿಂದ ಬಂದಿದ್ದೇನೆ. ನಾನು ಬದುಕಿರುವವರೆಗೂ ಎನ್ಡಿಎ ಜೊತೆಗೇ ಇರುತ್ತೇನೆ ಮತ್ತು ಪ್ರಧಾನಿ ಮೋದಿ ಅವರನ್ನು ಬೆಂಬಲಿಸುತ್ತೇನೆ. ಮಾಧ್ಯಮಗಳ ಟಿಆರ್ಪಿ ಹೆಚ್ಚಿಸಿಕೊಳ್ಳಲು ವದಂತಿಗಳನ್ನು ಹೆಚ್ಚಾಗಿ ಹರಡಲಾಗುತ್ತದೆ." ಎಂದು ಮಾಂಝಿ ನುಡಿದರು.
ಜಾರ್ಖಂಡ್ ಮತ್ತು ದೆಹಲಿಯಲ್ಲಿ ಎನ್ಡಿಎ ಸಾಧನೆಗಳ ಬಗ್ಗೆ ಟೀಕಿಸಿದ್ದಾರೆ ಎಂಬ ಹೇಳಿಕೆಗಳನ್ನು ನಿರಾಕರಿಸಿದ ಮಾಂಝಿ, "ಅಂತಹ ವಿಷಯಗಳ ಬಗ್ಗೆ ನಾನು ಎಂದಿಗೂ ಮಾಧ್ಯಮಗಳೊಂದಿಗೆ ಮಾತನಾಡಿಲ್ಲ. ನಾನು ನನ್ನ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದೇನೆ. ಒಂದು ಸಭೆಯಲ್ಲಿ 5,000 ಕ್ಕೂ ಹೆಚ್ಚು ಮತ್ತು ಜೆಹಾನಾಬಾದ್ನ ಇನ್ನೊಂದು ಸಭೆಯಲ್ಲಿ 10,000 ಕ್ಕೂ ಹೆಚ್ಚು ಜನರನ್ನು ಉದ್ದೇಶಿಸಿ ಮಾತನಾಡಿದ್ದೇನೆ. ಜಾರ್ಖಂಡ್ನಲ್ಲಿ ನನ್ನ ಶಕ್ತಿಯನ್ನು ಬಳಸಿಕೊಳ್ಳಲಾಗಲಿಲ್ಲ. ನಾವು ಪ್ರಯತ್ನಿಸಿದ್ದರೆ ಅಲ್ಲಿ ಎನ್ಡಿಎ ಇನ್ನೂ ಹೆಚ್ಚಿನ ಸ್ಥಾನಗಳನ್ನು ಪಡೆಯಬಹುದಿತ್ತು." ಎಂದರು.
ಜಾರ್ಖಂಡ್ನಲ್ಲಿ ಕನಿಷ್ಠ ಒಂದು ಸ್ಥಾನವನ್ನಾದರೂ ಬಿಟ್ಟುಕೊಡುವಂತೆ ಕೇಳಿದ್ದೆ: "ನಾನು ಇದನ್ನು ಜೆ.ಪಿ.ನಡ್ಡಾ ಅವರಿಗೂ ತಿಳಿಸಿದ್ದೆ. ನಮ್ಮ ಸಾಮರ್ಥ್ಯಗಳನ್ನು ಬಳಸಿಕೊಳ್ಳುವಂತೆ ಮತ್ತು ಕನಿಷ್ಠ ಒಂದು ಸ್ಥಾನವನ್ನಾದರೂ ನಮಗೆ ಬಿಟ್ಟು ಕೊಡುವಂತೆ ನಾನು ಅವರಿಗೆ ಹೇಳಿದ್ದೆ. ಆದರೆ ಇದನ್ನು ಪರಿಗಣಿಸಲಾಗಲಿಲ್ಲ. ಇದು ಎನ್ಡಿಎ ಫಲಿತಾಂಶದ ಮೇಲೆ ಪರಿಣಾಮ ಬೀರಿತು. ಪ್ರಧಾನಿ ಮೋದಿ ನಮ್ಮ ಮೈತ್ರಿಕೂಟದ ನಾಯಕರೂ ಆಗಿರುವುದರಿಂದ ಹೀಗಾಗಬಾರದೆಂದು ಬಯಸಿದ್ದೆ" ಎಂದು ಅವರು ಹೇಳಿದರು.
ಜಾರ್ಖಂಡ್ನಲ್ಲಿ ಎನ್ಡಿಎ ಸೋಲಿನ ಬಗ್ಗೆ ನಿರಾಶೆ ವ್ಯಕ್ತಪಡಿಸಿದ ಮಾಂಝಿ, "ಈ ಸೋಲಿನಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಬಹುಶಃ ನಾನು ಚುನಾವಣೆಯಲ್ಲಿ ಇನ್ನಷ್ಟು ತೊಡಗಿಸಿಕೊಂಡಿದ್ದರೆ ಫಲಿತಾಂಶಗಳು ಇನ್ನಷ್ಟು ಉತ್ತಮವಾಗಿರಬಹುದಿತ್ತು" ಎಂದರು. ದೆಹಲಿ ವಿಧಾನಸಭಾ ಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಅರವಿಂದ್ ಕೇಜ್ರಿವಾಲ್ ಸರ್ಕಾರ ಅಂತ್ಯಗೊಂಡು ಎನ್ಡಿಎ ಆಡಳಿತದ ಉದಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಹೇಳಿದರು.
ಇದನ್ನೂ ಓದಿ : 'ತೆರಿಗೆ ಭಯೋತ್ಪಾದನೆಗೆ ಬಲಿಯಾದ ಮಧ್ಯಮ ವರ್ಗ': ಕೇಂದ್ರದ ಮುಂದೆ 7 ಬೇಡಿಕೆಗಳನ್ನಿಟ್ಟ ಕೇಜ್ರಿವಾಲ್ - TAX TERRORISM