ನವದೆಹಲಿ: ಬಾಕ್ಸಿಂಗ್ ದಂತಕಥೆ, ಮಾಜಿ ಹೆವಿವೇಟ್ ಚಾಂಪಿಯನ್, ಸಾರ್ವಕಾಲಿಕ ಶ್ರೇಷ್ಠ ಬಾಕ್ಸರ್, ಐರನ್ ಮೈಕ್, ಕಿಡ್ ಡೈನಮೆಟ್ ಎಂದೇ ಪ್ರಖ್ಯಾತಿ ಪಡೆದಿರುವ ಮೈಕ್ ಟೈಸನ್ ವಿಶೇಷ ಬೆಳವಣಿಗೆಯೊಂದರಲ್ಲಿ ಯೂಟ್ಯೂಬರ್- ಜೇಕ್ ಪೌಲ್ ವಿರುದ್ಧ ನಾಳೆ ಕಾದಾಟ ನಡೆಸಲಿದ್ದಾರೆ. ಆದರೆ, ಗುರುವಾರ ತೂಕ ಪರಿಶೀಲಿಸುವ ವೇಳೆ ಎದುರಾಳಿ ಜ್ಯಾಕ್ ಪಾಲ್‌ಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮೈಕ್ ಟೈಸನ್ 19 ವರ್ಷದ ಹಿಂದೆ, ಅಧಿಕೃತವಾಗಿ ರಿಟೈರ್ಡ್ ಆದ ನಂತರ ಮತ್ತೆ ರಿಂಗ್‌ಗೆ ಮರಳಿದ್ದರಿಂದ ಕ್ರೀಡಾ ಪಟುಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದರು. ವಿಶೇಷ ಬೆಳವಣಿಗೆಯೊಂದರಲ್ಲಿ ಮತ್ತೊಬ್ಬ ಬಾಕ್ಸರ್ ಜೇಕ್ ಪೌಲ್ ವಿರುದ್ಧ ಕಾದಾಟ ನಡೆಸುತ್ತಿದ್ದು, ಈ ಐತಿಹಾಸಿಕ ಬಾಕ್ಸಿಂಗ್ ಕಾಳಗ ನಾಳೆ ರಾತ್ರಿ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರಗೊಳ್ಳಲಿದೆ. ಹಾಗಾಗಿ ಇವರಿಬ್ಬರ ನಡುವಿನ ಬಾಕ್ಸಿಂಗ್ ಕಾದಾಟ ವೀಕ್ಷಿಸಲು ಇಡೀ ಜಗತ್ತು ಕಾದು ಕುಳಿತಿದೆ. ಅದಕ್ಕೂ ಮುನ್ನ ನಡೆದ ಈ ಕಪಾಳಮೋಕ್ಷ ಪ್ರಸಂಗ ಚರ್ಚೆಗೆ ಗ್ರಾಸವಾಗಿದೆ.
ಪಂದ್ಯ ಆರಂಭಕ್ಕೂ ಮುನ್ನ ಮೈಕ್ ಟೈಸನ್, ಎದುರಾಳಿ ಪೌಲ್ಗೆ ಕಪಾಳಮೋಕ್ಷ ಮಾಡಿದ್ದು, ಕ್ರೀಡಾಭಿಮಾನಿಗಳಲ್ಲಿ ಗೊಂದಲ ತರಿಸಿದೆ. ತೂಕ ಪರಿಶೀಲಿಸಿದ ಬಳಿಕ ಟೈಸನ್ ತಮ್ಮ ಬಲಗೈನಿಂದ ಜ್ಯಾಕ್ ಪೌಲ್ ಕೆನ್ನೆಗೆ ಬಾರಿಸಿದ್ದಾರೆ. ಮೈದಾನದಿಂದ ನಿರ್ಗಮಿಸುತ್ತಿರುವ ಸ್ವಲ್ಪ ಹೊತ್ತಿಗೆ ಮುನ್ನ ನಡೆದ ವಿದ್ಯಮಾನ ಇದಾಗಿದ್ದರಿಂದ ಎಲ್ಲರೂ ಶಾಕ್ ಆಗಿದ್ದಾರೆ. ಟೈಸನ್ ತನ್ನ ಕೆನ್ನೆಯ ಮೇಲೆ ಬಾರಿಸಿದ್ದಕ್ಕೆ ಜ್ಯಾಕ್ ಪೌಲ್ ಪ್ರತಿರೋಧ ತೋರಿದ್ದರಿಂದ, ಸ್ಥಳದಲ್ಲಿ ಸ್ವಲ್ಪಹೊತ್ತು ಬಿಗುವಿನ ವಾತಾವರಣ ಅಲ್ಲಿತ್ತು. ಕೂಡಲೇ, ಅಲ್ಲಿದ್ದ ಭದ್ರತಾ ಸಿಬ್ಬಂದಿ ಮಧ್ಯ ಪ್ರವೇಶಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.