ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರನ್ನು ಪ್ರಧಾನಿ ಮೋದಿ "ಅತ್ಯುತ್ತಮ ಸಾಧನೆ" ಎಂದು ಶ್ಲಾಘಿಸಿದ್ದಾರೆ.
26ರ ಹರೆಯದ ಚೋಪ್ರಾ ಅವರು 89.45 ಮೀಟರ್ ದೂರು ಜಾವೆಲಿನ್ ಎಸೆದು ಚಿನ್ನದ ಪದಕ ಗೆಲ್ಲುವಲ್ಲಿ ವಿಫಲವಾದರು. ಆದರೆ ಪಾಕಿಸ್ತಾನದ ಆಟಗಾರ ಅರ್ಷದ್ ನದೀಮ್ 92.97 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಬೆಳ್ಳಿ ಪದಕ ಗೆಲ್ಲುವ ಮೂಲಕ ಸತತ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಟ್ರ್ಯಾಕ್ ಹಾಗೂ ಫೀಲ್ಡ್ ಅಥ್ಲೀಟ್ ಎನ್ನುವ ಹೆಗ್ಗಳಿಕೆಗೆ ನೀರಜ್ ಚೋಪ್ರಾ ಪಾತ್ರರಾಗಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, "ನೀರಜ್ ಚೋಪ್ರಾ ಅವರು ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಅವರು ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಚೋಪ್ರಾ ಮತ್ತೊಂದು ಒಲಿಂಪಿಕ್ ಯಶಸಸ್ಸಿನೊಂದಿಗೆ ಮರಳುತ್ತಿರುವುದರ ಬಗ್ಗೆ ಭಾರತ ಹರ್ಷ ವ್ಯಕ್ತಪಡಿಸುತ್ತದೆ. ಬೆಳ್ಳಿಯನ್ನು ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. ನೀರಜ್ ಚೋಪ್ರಾ ಅವರು, ನಮ್ಮ ದೇಶ ಹೆಮ್ಮೆ ಪಡುವಂತೆ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುವ ಮುಂಬರುವ ಅಸಂಖ್ಯಾತ ಕ್ರೀಡಾಪಟುಗಳಿಗೆ ಪ್ರೇರೇಪಣೆಯಾಗಿರುತ್ತಾರೆ." ಎಂದು ಹೇಳಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು ಕೂಡ, ದೇಶ ಹೆಮ್ಮೆ ಪಡುವಂತೆ ಮಾಡಿದ ಅವರ ಸಾಧನೆಯನ್ನು ಪ್ರಶಂಸಿಸುವ ಮೂಲಕ ನೀರಜ್ ಚೋಪ್ರಾ ಅವರನ್ನು ಅಭಿನಂದಿಸಿದ್ದಾರೆ. ಎಕ್ಸ್ ಪೋಸ್ಟ್ನಲ್ಲಿ "ಅದ್ಭುತವಾದ ನೀರಜ್ ಚೋಪ್ರಾ ವರು ದೇಶಕ್ಕೆ ಕೀರ್ತಿ ತಂದಿದ್ದಾರೆ. ಉತ್ತಮ ಪ್ರದರ್ಶನ ನೀಡಿದ್ದೀರಿ ಚಾಂಪಿಯನ್. #ParisOlympics2024 ರಲ್ಲಿ ಬೆಳ್ಳಿ ಗೆದ್ದಿದ್ದಕ್ಕಾಗಿ ಅಭಿನಂದನೆಗಳು. ಭಾರತೀಯ ಕ್ರೀಡಾ ಇತಿಹಾಸದಲ್ಲಿ ಅದ್ಭುತವಾದ ದಾಖಲೆ ಬರೆಯುವ ಮೂಲಕ ನೀವು ತ್ರಿವರ್ಣ ಧ್ವಜದ ಗೌರವವನ್ನು ಹೆಚ್ಚಿಸಿದ್ದೀರಿ. ನಿಮ್ಮ ಗಮನಾರ್ಹವಾದ ಸಾಧನೆಗೆ ಇಡೀ ದೇಶವೇ ಖುಷಿ ಪಡುತ್ತದೆ." ಎಂದು ಬರೆದಿದ್ದಾರೆ.