ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ಅವರು ಚಿತ್ರದುರ್ಗದಲ್ಲಿ ವಾಸವಿದ್ದ ಮನೆಯನ್ನು ಸರ್ಕಾರ ಶೀಘ್ರ ಖರೀದಿಸಿ, ಒಂದು ತಿಂಗಳಲ್ಲಿ ನೋಂದಣಿ ಮಾಡಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಿಜಲಿಂಗಪ್ಪ ಅವರ ಮನೆ ಖರೀದಿಸಿ ಸಂರಕ್ಷಿಸಲು ಹಾಗೂ ಅಭಿವೃದ್ಧಿಗೊಳಿಸುವ ಸಂಬಂಧ ಸಚಿವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಮತ್ತು ಚಿತ್ರದುರ್ಗ ಜಿಲ್ಲಾಧಿಕಾರಿ ಅವರ ಜೊತೆ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಗುರುವಾರ ಸಭೆ ನಡೆಸಿ, ಈ ಮೇಲಿನ ಸೂಚನೆ ನೀಡಿದರು.
ನಿಜಲಿಂಗಪ್ಪ ಅವರ ಮನೆ ಖರೀದಿ ಹಾಗೂ ಸಂರಕ್ಷಣೆ ಸಂಬಂಧ ಈಗಾಗಲೇ ಸರ್ಕಾರ 5 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದರೂ ತಡವಾಗುತ್ತಿರುವ ಬಗ್ಗೆ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಹಿಂದೆ ಮನೆ ಖರೀದಿ ಸಂಬಂಧ ತಾಂತ್ರಿಕ ಕಾರಣಗಳು ಎದುರಾಗಿತ್ತು. ಇದೀಗ ನಿಜಲಿಂಗಪ್ಪ ಅವರ ಪುತ್ರ ಹಾಗೂ ಅವರ ಸಂಬಂಧಿಗಳ ಜತೆ ಚರ್ಚೆ ನಡೆಸಿದ್ದು, ಮನೆ ಖರೀದಿ ಪ್ರಕ್ರಿಯಿಸಿ ಮುಂದಾಗಿದ್ದೇವೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಾನೂನಾತ್ಮಕವಾಗಿ ವ್ಯವಹರಿಸಿ, ಕೂಡಲೇ ಮನೆ ಖರೀದಿಸಿ ಎಂದು ತಾಕೀತು ಮಾಡಿದರು.
ಬಳಿಕ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ''ನಿಜಲಿಂಗಪ್ಪ ಅವರ ಮನೆ ಖರೀದಿ ಹಿನ್ನೆಲೆಯಲ್ಲಿ ಕಾನೂನು ಇಲಾಖೆಯಿಂದ ಅಭಿಪ್ರಾಯ ಪಡೆಯಲಾಗಿದೆ. ನಿಜಲಿಂಗಪ್ಪ ಅವರು ವಾಸವಿದ್ದ ಕೋಟೆನಾಡಿನ ಮನೆ ಖಾತೆ ಅವರ 3ನೇ ಪುತ್ರ ಎಸ್.ಎನ್.ಕಿರಣ್ ಶಂಕರ್ ಅವರ ಹೆಸರಿನಲ್ಲಿತ್ತು. ನಿಜಲಿಂಗಪ್ಪ ಅವರು ಬರೆದಿಟ್ಟಿರುವ ವಿಲ್ ಪ್ರಕಾರ ಮನೆ ಖಾತೆಯು ಪ್ರಸ್ತುತ ನಿಜಲಿಂಗಪ್ಪ ಅವರ ಮೊಮ್ಮಗ ವಿನಯ್ ಬಿನ್ ಎಸ್.ಎ.ಕಿರಣ್ ಶಂಕರ್ ಅವರ ಹೆಸರಿನಲ್ಲಿದ್ದು, ಸಂಪೂರ್ಣ ಇದೀಗ ಆಸ್ತಿಗೆ ವಿನಯ್ ಮಾಲೀಕತ್ವ ಹೊಂದಿದ್ದಾರೆ. ಈ ಸಂಬಂಧ ಅಧಿಕಾರಿಗಳು ಕಿರಣ್ ಅವರೊಂದಿಗೆ ಚರ್ಚೆ ನಡೆಸಿದ್ದು, ತಿಂಗಳಲ್ಲಿ ಮನೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ'' ಎಂದು ಮಾಹಿತಿ ನೀಡಿದರು.
5 ಕೋಟಿ ಹಣ ಬಿಡುಗಡೆ: ''ಮನೆ ಖರೀದಿಸಿ ಸಂರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು 5 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಈ ಪೈಕಿ ಅಂದಾಜು 4.18 ಕೋಟಿ ರೂ. ಹಣದಲ್ಲಿ ಮನೆ ಖರೀದಿಸಲು ತೀರ್ಮಾನಿಸಲಾಗಿದೆ. ಮನೆ ಅಭಿವೃದ್ಧಿಗೆ 81,50 ಲಕ್ಷ ರೂ. ಹಣ ವೆಚ್ಚ ಮಾಡಲಾಗುವುದು'' ಎಂದು ಸಚಿವರು ವಿವರಿಸಿದರು.
''ಕರ್ನಾಟಕದ ಏಕೀಕರಣದ ಹೋರಾಟದ ಮುಂಚೂಣಿ ನಾಯಕರಾಗಿದ್ದ ಎಸ್.ನಿಜಲಿಂಗಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ನಾಡಿಗಾಗಿ ಬದುಕನ್ನೇ ಮುಡಿಪಾಗಿಟ್ಟ ಮಾಜಿ ಮುಖ್ಯಮಂತ್ರಿಗಳ ಮನೆಯನ್ನು ಖರೀದಿಸಿ ಸ್ಮಾರಕವಾಗಿಸುವ ಕಾರ್ಯ ನನ್ನ ಅವಧಿಯಲ್ಲಿ ಆಗುತ್ತಿರುವುದು ಸಂತಸ ತರಿಸಿದೆ'' ಎಂದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ, ಚಿತ್ರದುರ್ಗ ಜಿಲ್ಲಾಧಿಕಾರಿ ವೆಂಕಟೇಶ್, ಇಲಾಖೆ ನಿರ್ದೇಶಕಿ ಡಾ.ಧರಣಿ ದೇವಿ ಮಾಲಗತ್ತಿ, ಜಂಟಿ ನಿರ್ದೇಶಕ ಅಶೋಕ್ ಛಲವಾದಿ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ: ಕೋವಿಡ್ ಹಗರಣ: ತನಿಖೆ, ಕ್ರಮ ವಹಿಸಲು ಎಸ್ಐಟಿ ರಚನೆಗೆ ಸಂಪುಟದ ತೀರ್ಮಾನ