ಪಶ್ಚಿಮ ಗೋದಾವರಿ (ಆಂಧ್ರಪ್ರದೇಶ) : ಫಂಕ್ಷನ್ ಹಾಲ್ನಲ್ಲಿ ಮದುವೆ ನಡೆಯುತ್ತಿತ್ತು. ಅಷ್ಟರಲ್ಲಿ ಆ ಮದುವೆ ಸ್ಥಳಕ್ಕೆ ಅನಿರೀಕ್ಷಿತ ಅತಿಥಿಯೊಬ್ಬರು ಆಗಮಿಸಿದ್ದಾರೆ. ಅತಿಥಿಯನ್ನು ನೋಡಿ ಅಲ್ಲಿದ್ದವರೆಲ್ಲ ಬೆಚ್ಚಿಬಿದ್ದಿದ್ದಾರೆ. ಕೆಲವರಂಥೂ ಅಲ್ಲಿಂದ ಓಡಿ ಹೋಗಿದ್ದಾರೆ. ಇನ್ನು ಕೆಲವರು ಚೀತ್ಕಾರ ಮಾಡಿದ್ದಾರೆ. ಹಾಗಿದ್ರೆ ಅಲ್ಲಿಗೆ ಬಂದಿದ್ದು, ಹುಲಿಯೋ, ಸಿಂಹವೋ ಅನ್ನೋದು ನಿಮ್ಮ ಊಹೆ ಆಗಿದ್ದರೆ ಅದು ಸುಳ್ಳು.
ಮದುವೆ ಮನೆಗೆ ಬಂದ ಊಹಿಸದ ಅತಿಥಿ 7 ಅಡಿ ಉದ್ದದ ಹೆಬ್ಬಾವು. ಹೌದು, ದೊಡ್ಡ ಹೆಬ್ಬಾವು ವಿವಾಹ ಸ್ಥಳಕ್ಕೆ ನುಸುಳಿದೆ. ಮದುವೆಗೆ ಬಂದವರಲ್ಲಿ ಇದನ್ನು ಕಂಡವರು ಹೌಹಾರಿದ್ದಾರೆ. ಇಂಥದ್ದೊಂದು ಘಟನೆ ನಡೆದಿದ್ದು, ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಕೊವ್ವೂರಿನಲ್ಲಿ.
ಇಲ್ಲಿನ ಕಾಶಿ ವಿಶ್ವೇಶ್ವರ ಸ್ವಾಮಿ ಮಂಟಪದಲ್ಲಿ ಬುಧವಾರ ರಾತ್ರಿ ಜೋಡಿಯೊಂದರ ಮದುವೆ ಕಾರ್ಯಕ್ರಮಗಳು ನಡೆಯುತ್ತಿತ್ತು. ಬಂಧು ಬಾಂಧವರು ಮದುವೆಯ ಸಂಭ್ರಮದಲ್ಲಿದ್ದರು. ಗೋಡೆಯ ಪಕ್ಕದಲ್ಲಿ ಕತ್ತಲ ರಾತ್ರಿಯಲ್ಲಿ ಮಿಂಚುತ್ತಿರುವ ವಸ್ತುವೊಂದು ಅಲ್ಲಿದ್ದ ಒಬ್ಬರ ಕಣ್ಣಿಗೆ ಬಿದ್ದಿದೆ. ಅದೇನು ಅಂತ ಹತ್ತಿರಕ್ಕೆ ಹೋಗಿ ನೋಡಿದಾಗಲೇ ಆತನ ಜೀವ ಬಾಯಿಗೆ ಬಂದಿದ್ದು.
ಸುಮಾರು 7 ಅಡಿ ಉದ್ದದ ಹೆಬ್ಬಾವು ಅಲ್ಲಿ ಕುಳಿತಿತ್ತು. ಇದನ್ನು ಕಂಡ ಆತ ಭಯದಲ್ಲಿ ಹಾವು.. ಹಾವು.. ಎಂದು ಜೋರಾಗಿ ಕಿರುಚುತ್ತಾ ಓಡಿದ್ದಾನೆ. ಆ ಕಿರುಚಾಟದಿಂದ ಮದುವೆ ಮಂಟಪದಲ್ಲಿದ್ದವರೆಲ್ಲಾ ಭಯಭೀತರಾಗಿದ್ದಾರೆ. ಮದುವೆ ಮಂಟಪದೊಳಗೆ ನುಸುಳಿದ ಹೆಬ್ಬಾವನ್ನು ಜನರು ಸುತ್ತುವರಿದರು.
ಒಂದು ಗಂಟೆ ಕದಲದ ಹೆಬ್ಬಾವು: ಜನರು ಮಾಡುತ್ತಿದ್ದ ಗದ್ದಲ ನೋಡಿ ಹೆಬ್ಬಾವು ಹೆದರಿ ಇದ್ದ ಸ್ಥಳದಿಂದ ಒಂದು ಗಂಟೆಗೂ ಹೆಚ್ಚು ಕದಲಿಲ್ಲ. ಬಳಿಕ ಸಾವಾಕಾಶವಾಗಿ ಕಲ್ಯಾಣ ಮಂಟಪದ ದ್ವಾರದಿಂದ ಹೊರ ಹೋಗಿದೆ. ಇಷ್ಟೊತ್ತಿಗಾಗಲೇ ಜನರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಬಂದ ಇಲಾಖೆ ಅಧಿಕಾರಿಗಳು ಹಾವನ್ನು ಹಿಡಿದು ಕೊಂಡೊಯ್ದರು. ಬಳಿಕ ಮಂಟಪದಲ್ಲಿ ಮದುವೆ ಕಾರ್ಯಕ್ರಮಗಳು ಸಾಂಗವಾಗಿ ನಡೆದಿವೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಹಿಂಗಾರು ಸಕ್ರಿಯ: ನಾಲ್ಕು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ