ನಿಖಿಲ್ ಕುಮಾರಸ್ವಾಮಿ ಗೆದ್ದಾಯಿತು: ಕಾಂಗ್ರೆಸ್ ನಾಯಕರಿಗೆ ಅಭಿನಂದನೆ ಎಂದ ಪ್ರತಿಪಕ್ಷದ ನಾಯಕ ಆರ್ ಅಶೋಕ್ - R ASHOK
ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ನಿಖಿಲ್ ಕುಮಾರಸ್ವಾಮಿ ಕುರಿತು ಮಾತನಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಗೆದ್ದಾಯಿತು ಎಂದಿದ್ದಾರೆ.
Published : Nov 14, 2024, 9:28 PM IST
|Updated : Nov 14, 2024, 10:03 PM IST
ಬೆಂಗಳೂರು : ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಈಗಾಗಲೇ ಗೆದ್ದಿದ್ದಾರೆ. 20-30 ಸಾವಿರ ಅಂತರದಲ್ಲಿ ಅವರು ಗೆಲ್ಲಲಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಜಮೀರ್ ಅಹ್ಮದ್ ಅವರು ಕುಮಾರಸ್ವಾಮಿಗೆ ಕರಿಯ ಎಂದು ಹೀಯಾಳಿಸಿದ್ದು, ದೇವೇಗೌಡರ ಕುಟುಂಬ ಖರೀದಿಸುತ್ತೇನೆಂದು ಹೇಳಿದ್ದು, ಒಕ್ಕಲಿಗ ಜನಾಂಗಕ್ಕೆ ಅವಮಾನ ಮಾಡಿದ್ರು. ಇದೆಲ್ಲಾ ಕಾಂಗ್ರೆಸ್ನವರ ಬಳುವಳಿ. ಇವರ ಸಹಕಾರಕ್ಕೆ ಧನ್ಯವಾದ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ನವರ ಲಂಗು ಲಗಾಮಿಲ್ಲದ ಮಾತು. ಮುಸ್ಲಿಮರೆಲ್ಲರೂ ಚಂದ ಎತ್ತಿ ದೇವೇಗೌಡರ ಕುಟುಂಬವನ್ನು ಕೊಂಡುಕೊಳ್ಳುತ್ತೇವೆ ಎಂದರು. ಇದೆಲ್ಲಾ ಚುನಾವಣೆಯಲ್ಲಿ ಪರಿಣಾಮ ಬೀರಿವೆ. ಕಾಂಗ್ರೆಸ್ ವಿರುದ್ಧ ಅಲೆ ಇದೆ. ಮೂರಕ್ಕೆ ಮೂರು ಕ್ಷೇತ್ರಗಳು ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
50 ಶಾಸಕರನ್ನು ಖರೀದಿಸಲು ಬೇಕಾದ 2,500 ಕೋಟಿ ರೂ. ಎಲ್ಲಿದೆ?. ಯಾವ ವ್ಯಕ್ತಿ ಖರೀದಿಸಲು ಮುಂದಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಬೇಕು. ಈ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಕಾಲ ಸನ್ನಿಹಿತವಾಗಿದ್ದು, ಅದಕ್ಕಾಗಿ ಶಾಸಕರಿಗೆ ದರ ನಿಗದಿ ಮಾಡಿದ್ದಾರೆ. ಗುಪ್ತಚರ ವಿಭಾಗ ಅವರ ಕೈಯಲ್ಲೇ ಇದ್ದು, ಎಲ್ಲಿ ಯಾರಿಗೆ ಎಷ್ಟು ಹಣ ನೀಡಲಾಗಿದೆ ಎಂಬ ವರದಿಯನ್ನು ಅವರು ತರಿಸಿಕೊಳ್ಳಬಹುದಿತ್ತು. ತಮ್ಮ ಸ್ಥಾನ ಅಸ್ಥಿರವಾಗಿರುವುದರಿಂದ ಹೀಗೆ ಮಾತಾಡಿದ್ದಾರೆ. ಹೊಸ ಸರ್ಕಾರ ರಚನೆಯಾಗಲು 50ಕ್ಕೂ ಅಧಿಕ ಶಾಸಕರು ಪಕ್ಷ ಬಿಟ್ಟು ಹೊರಗೆ ಬರಬೇಕಾಗುತ್ತದೆ. ಆ ಲೆಕ್ಕದಲ್ಲೂ ಅವರು ತಪ್ಪಾಗಿ ಹೇಳಿದ್ದಾರೆ ಎಂದರು.
50 ಶಾಸಕರಿಗೆ ತಲಾ 50 ಕೋಟಿ ರೂ. ಎಂದರೆ 2,500 ಕೋಟಿ ರೂ. ಬೇಕಾಗುತ್ತದೆ. ಇಷ್ಟೊಂದು ಹಣ ಯಾರ ಬಳಿ ಇದೆ? ಹರಾಜಾಗುವ ಶಾಸಕರು ಯಾರು ಎಂಬ ಪ್ರಶ್ನೆಗೆ ಉತ್ತರಿಸಲಿ. 2,500 ಕೋಟಿ ರೂ. ಬೇನಾಮಿ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಕೂಡಲೇ ವಶಕ್ಕೆ ಪಡೆಯಬೇಕು. ಖರೀದಿ ಮಾಡುವ ಆ ವ್ಯಕ್ತಿಯನ್ನು ಬಂಧಿಸಬೇಕು. ಜಾರಿ ನಿರ್ದೇಶನಾಲಯ ಮುಖ್ಯಮಂತ್ರಿಯನ್ನು ವಿಚಾರಣೆ ಮಾಡಿ ಈ ಕುರಿತು ಮಾಹಿತಿ ಪಡೆಯಬೇಕು ಎಂದು ಆಗ್ರಹಿಸಿದರು.
ಇವರನ್ನು ಮುಟ್ಟಿದರೆ ಜನರು ದಂಗೆ ಏಳುತ್ತಾರೆ ಎನ್ನಲು ಇವರು ಮೇಲಿಂದ ಇಳಿದು ಬಂದವರಲ್ಲ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ನ್ಯಾಯಾಂಗದ ಬಗ್ಗೆ ಗೌರವವಿಲ್ಲ. ಇವರ ಪರವಾಗಿ ತೀರ್ಪು ಬಂದರೆ ನ್ಯಾಯಾಲಯ ಸರಿ ಇದೆ, ಇಲ್ಲವಾದರೆ ಸರಿ ಇಲ್ಲ ಎನ್ನುತ್ತಾರೆ. ಸಚಿವ ಜಮೀರ್ ಅಹ್ಮದ್ ಕೂಡ ಇದೇ ರೀತಿ ಮಾತಾಡಿದ್ದಾರೆ. ಕಾಂಗ್ರೆಸ್ ಗೆದ್ದಾಗ ಇವಿಎಂ ಸರಿ ಇದೆ, ಸೋತಾಗ ಇವಿಎಂ ಸರಿ ಇಲ್ಲ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.
ಕೋವಿಡ್ ವರದಿ ಬಿಡುಗಡೆ ಮಾಡಲಿ : ಅಬಕಾರಿ ಇಲಾಖೆಯಲ್ಲಿ ಹಗರಣ ಹಾಗೂ ವಕ್ಫ್ ಭೂ ಕಬಳಿಕೆ ಮುಂದುವರೆದಿದೆ. ಅಬಕಾರಿ ಇಲಾಖೆಯ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತಾಡಿದ್ದಾರೆ. ಇದನ್ನು ಸಿಬಿಐ ತನಿಖೆಗೆ ವಹಿಸುವುದು ಸೂಕ್ತ. ಕೋವಿಡ್ ತನಿಖೆಯ ಭಾಗ 1 ಮಾತ್ರ ಬಂದಿದೆ. ನ್ಯಾ.ಕೆಂಪಣ್ಣ ಆಯೋಗದ ಭಾಗ 1 ಕೂಡ ಬಂದಿಲ್ಲ. ಅದರ ವರದಿ ಸಂಪೂರ್ಣವಾಗಿ ಹೊರಬರಲಿ. ಕೋವಿಡ್ ಇಡೀ ಜಗತ್ತಿನಲ್ಲಿತ್ತು. ಆಗ ಯಾವ ಸರಕು ಯಾವ ದರದಲ್ಲಿತ್ತು ಎಂಬುದನ್ನು ಮೊದಲು ತಿಳಿಸಲಿ. ಎಲ್ಲ ರಾಜ್ಯದಲ್ಲಿ ಕಿಟ್‌ಗಳನ್ನು ಎಷ್ಟು ದರಕ್ಕೆ ಖರೀದಿ ಮಾಡಲಾಗಿದೆ ಎಂದು ತಿಳಿಸಲಿ. ತುರ್ತು ಖರೀದಿ ಮಾಡದೆ 60 ದಿನಗಳ ಟೆಂಡರ್‌ಗೆ ಕಾದುಕೊಂಡು ಕೂತಿದ್ದರೆ ಎಲ್ಲವೂ ಮುಗಿದು ಹೋಗುತ್ತಿತ್ತು. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಬೇಕು. ಕೋವಿಡ್‌ನ ಪೂರ್ಣ ವರದಿಯನ್ನು ಸದನದಲ್ಲಿ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.
ಇ ಖಾತಾ ವ್ಯವಸ್ಥೆ ಸರಳೀಕರಣ ಅಗತ್ಯ : ಇ ಖಾತಾ ವ್ಯವಸ್ಥೆಯನ್ನು ಸರ್ಕಾರ ಸರಳೀಕರಣಗೊಳಿಸಬೇಕು. ಯಾವುದೇ ಲಂಚವಿಲ್ಲದೆ ಜನರು ಸುಲಭವಾಗಿ ಸೇವೆ ಪಡೆಯುವಂತಾಗಬೇಕು ಎಂದು ಆಗ್ರಹಿಸಿದರು.
ಸರ್ಕಾರ ಇ ಖಾತಾ ಮಾಡುವ ಮುನ್ನ ಮಾಹಿತಿ ಪಡೆಯಬೇಕಿತ್ತು. ಇದಕ್ಕೆ ಬೇಕಾದ ದಾಖಲೆ ಯಾವುದು, ಯಾವ ವಿಭಾಗದಲ್ಲಿ ಎಷ್ಟು ಮಾಡಬಹುದು ಎಂದು ಆಲೋಚಿಸಬೇಕಿತ್ತು. ಏಕಾಏಕಿ ಇ ಖಾತಾ ಮಾಡಿರುವುದರಿಂದ ಜನರಿಗೆ ತೊಂದರೆಯಾಗಿದೆ. ಈಗಾಗಲೇ ಅಪ್ಲೋಡ್ ಮಾಡಿರುವ ಇ ಖಾತಾಗಳಲ್ಲಿ ಮಾಲೀಕರ ಹೆಸರು, ಭೂಮಿಯ ಅಳತೆಯಲ್ಲಿ ತಪ್ಪಾಗಿದೆ. ಆಸ್ತಿ ವಿವರ ಸರಿಯಾಗಿ ಸಿಗುತ್ತಿಲ್ಲ. ಎನ್‌ಆರ್‌ಐ ಮಾಲೀಕತ್ವದ ಆಸ್ತಿಗೆ ಅಫಿಡವಿಟ್ ಮಾಡಬೇಕಿದೆ. ಈ ಯಾವ ಕೆಲಸಗಳೂ ಆಗಿಲ್ಲ ಎಂದರು.
ಲಂಚವಿಲ್ಲದೇ ಇ ಖಾತಾ ವರ್ಗಾವಣೆಯಾಗಬೇಕು: ಜನರಿಗೆ ಮನೆ ಸಾಲ ಸಿಗಲು ಇ ಖಾತಾ ಬೇಕಾಗುತ್ತದೆ. ದಿನಕ್ಕೆ 5 ರಿಂದ 6 ರಷ್ಟು ಇ ಖಾತಾ ಮಾಡಲಾಗುತ್ತಿದೆ. ಸರ್ಕಾರ ಲಂಚಕ್ಕೆ ಅವಕಾಶ ನೀಡಿ, ಜನರಿಗೆ ತೊಂದರೆ ನೀಡುತ್ತಿದೆ. ಸರ್ಕಾರ ಕೂಡಲೇ ಈ ವ್ಯವಸ್ಥೆಯನ್ನು ಸರಳೀಕರಣಗೊಳಿಸಬೇಕು. ಯಾವುದೇ ಲಂಚವಿಲ್ಲದೇ ಇ - ಖಾತಾ ವರ್ಗಾವಣೆಯಾಗಬೇಕು. ನಾನು ಕಂದಾಯ ಸಚಿವನಾಗಿದ್ದಾಗ ಶುಲ್ಕ ಕಡಿಮೆ ಮಾಡಿದ್ದೆ. ಈಗಿನ ಸರ್ಕಾರ ಮುದ್ರಾಂಕ ಶುಲ್ಕವನ್ನು 200-250% ಹೆಚ್ಚಿಸಿದೆ. ಜೊತೆಗೆ ಇ ಖಾತಾ ಬರೆ ಬಿದ್ದಿದೆ. ಸರ್ಕಾರ ಈ ಕುರಿತು ಕ್ರಮ ವಹಿಸದಿದ್ದರೆ ಸಾವಿರಾರು ಕೋಟಿ ರೂಪಾಯಿ ಆದಾಯ ನಷ್ಟವಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ : ರೈತರ ತಲೆ ಮೇಲೆ ಸಿದ್ದರಾಮಯ್ಯ ಟೋಪಿ ಹಾಕ್ತಾರೆ, ಆಸ್ತಿ ಕಬಳಿಕೆ ವಕ್ಫ್ ಬೋರ್ಡ್ ದಂಧೆ: ಅಶೋಕ್ ಆರೋಪ