ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (NWKRTC) ಹುಬ್ಬಳ್ಳಿಯಲ್ಲಿ ನವೆಂಬರ್ 15 ರಂದು 120 ಹೊಸ ಬಸ್‌ಗಳಿಗೆ ಚಾಲನೆ ನೀಡಲಿದೆ. ಶಕ್ತಿ ಯೋಜನೆ ಯಶಸ್ವಿ ಜಾರಿ ನಡುವೆಯೂ ಹೈಟೆಕ್ ವ್ಯವಸ್ಥೆ ಒಳಗೊಂಡ ಬಸ್‌ಗಳು ರಸ್ತೆಗೆ ಇಳಿಯಲಿವೆ. ಈ ಬಸ್‌ಗಳು (BS6) ಭಾರತ್ ಸ್ಟೇಜ್ 6 ಮಾದರಿ ಬಸ್ಗಳಾಗಿವೆ. ಇದರಲ್ಲಿ ಸಿಸಿ ಕ್ಯಾಮರಾಗಳು, ಎಲ್ಇಡಿ ಸ್ಕ್ರೀನ್ಗಳು ಮತ್ತು ಸುರಕ್ಷತಾ ಬಟನ್‌ಗಳು ಒಳಗೊಂಡಿವೆ.
ರಾಜ್ಯದ ಜನರಿಗೆ ಅತ್ಯುತ್ತಮ ಸಾರಿಗೆ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಅವಧಿ ಮೀರಿದ ಬಸ್‌ಗಳನ್ನು ಸ್ಥಗಿತಗೊಳಿಸಿ ಹೊಸ ಬಸ್‌ಗಳನ್ನು ಖರೀದಿಸಲಾಗುತ್ತದೆ. ಈ ವರ್ಷವು ಹಳೇ ಬಸ್‌ಗಳನ್ನು ಸ್ಕ್ರಾಪ್ಗೆ ಹಾಕಿ, ಬೇಡಿಕೆ ಮತ್ತು ಸಂಚಾರ ದಟ್ಟಣೆಗೆ ಅನುಗುಣವಾಗಿ ಹೊಸ ಬಸ್‌ಗಳು ಸಂಚರಿಸಲಿವೆ.
ವಾಯುವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗ ಎಂ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, ವಾಯುವ್ಯ ಸಾರಿಗೆ ಸಂಸ್ಥೆ ತನ್ನ 27 ವರ್ಷಗಳ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ 6 ಜಿಲ್ಲೆಗಳು ಮತ್ತು 9 ವಿಭಾಗಗಳನ್ನು ಒಳಗೊಂಡಿರುವ ನಿಗಮದ ಅಡಿಯಲ್ಲಿ ಪ್ರತಿ ವರ್ಷ ನಿಗಮವು ಹುಬ್ಬಳ್ಳಿಯ ಕೇಂದ್ರ ಕಚೇರಿಯಲ್ಲಿ ಸಂಸ್ಥಾಪನಾ ದಿನವನ್ನು ಆಚರಿಸುತ್ತದೆ. ಕಾರ್ಯಕ್ರಮದಲ್ಲಿ, ಮೆಕ್ಯಾನಿಕಲ್ ನೇಮಕಾತಿಗಳು, ಜೂನಿಯರ್ ನೇಮಕಾತಿಗಳು, ವಿಮಾ ಪತ್ರಗಳು, ಚೆಕ್ ವಿತರಣೆ, ಪಿಎಫ್, ಇಪಿಎಫ್ ಅನ್ನು ಆನ್‌ಲೈನ್ ರೂಪದಲ್ಲಿ ಪರಿಚಯಿಸಲಾಗುವುದು. ಜೊತೆಗೆ ಎರಡು ಡಿಜಿಟಲ್ ಯೋಜನೆ ಹಾಕಿಕೊಂಡಿದ್ದು, ವಾಣಿಜ್ಯ ವಲಯದಲ್ಲಿ ಯುಪಿಐ ಪಾವತಿಯನ್ನು ಪರಿಚಯಿಸಲಾಗುವುದು ಎಂದರು.
ಮುಂದಿನ ವರ್ಷದ ವೇಳೆಗೆ ಹಲವು ಬಸ್‌ಗಳು ಸ್ಕ್ರ್ಯಾಪ್ ಹಂತಕ್ಕೆ ತಲುಪಲಿವೆ. ಬಸ್‌ಗಳ ಕೊರತೆ ಮತ್ತು ಸರ್ಕಾರಿ ಬಸ್‌ಗಳ ಬೇಡಿಕೆಯನ್ನು ಗಮನಿಸಿ, ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಆರು ವಿಭಾಗಗಳಿಗೆ ಹಂಚಿಕೆ ಮಾಡಲಾಗುವುದು. ತಾಂತ್ರಿಕ ವಿಭಾಗ ಹಾಗೂ ಸಂಚಾರ ವಿಭಾಗದ ಅಧಿಕಾರಿಗಳ ಮಾಹಿತಿ ಪಡೆದು ಪ್ರತಿ ವಿಭಾಗಕ್ಕೆ 30 ರಿಂದ 40 ಬಸ್‌ಗಳನ್ನು ಒದಗಿಸಲಾಗುವುದು ಎಂದರು.
ಹೈಟೆಕ್ ಬಿಎಸ್ 6 ಬಸ್‌ಗಳು: ಬಸ್‌ಗಳನ್ನು ಟಾಟಾ ಮತ್ತು ಅಶೋಕ್ ಲೇಲ್ಯಾಂಡ್ ಕಂಪನಿಗಳು ತಯಾರಿಸಿವೆ. ಪ್ರಯಾಣಿಕರು ಆರಾಮವಾಗಿ ಕುಳಿತುಕೊಳ್ಳುವ ರೀತಿಯಲ್ಲಿ ಬಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಮತ್ತು ಚಾಲಕರ ನಿರ್ಲಕ್ಷ್ಯದ ಮೇಲೆ ನಿಗಾ ಇಡಲು ನಾಲ್ಕು ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, 15 ದಿನಗಳ ಸ್ಟೋರೇಜ್ ಸಾಮರ್ಥ್ಯ ಮತ್ತು ಎಲ್ಇಡಿ ಡಿಸ್ಪ್ಲೇ ಇದೆ.
ವಿರಾಮದ ಸಮಯವನ್ನು ಪ್ರಯಾಣಿಕರಿಗೆ ತಿಳಿಸಲು ಮೈಕ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗೆಗಾಗಿ ಮುಂದಿನ ಎರಡು ಸೀಟ್ಗಳು ಹಾಗೂ ಬಸ್ನ ಹಿಂದಿನ ಸೀಟಿಗೆ ಸೀಟ್ ಬೆಲ್ಟ್ ವ್ಯವಸ್ಥೆ ಮಾಡಲಾಗಿದೆ. ಹೊಸ ಬಸ್‌ಗಳು ಕೆಂಪು ಬಣ್ಣದಿಂದ ಪ್ರಯಾಣಿಕರನ್ನು ಸೆಳೆಯುತ್ತಿದ್ದು, ಪ್ರಯಾಣಿಕರು ಹಾಗೂ ಚಾಲಕರ ಸ್ನೇಹಿಯಾಗಿವೆ ಎಂದು ಸಾರಿಗೆ ಸಿಬ್ಬಂದಿ ತಹೀಬ್ ಮಾಹಿತಿ ನೀಡಿದರು.
ವಾಯುವ್ಯ ಸಾರಿಗೆ ಸಂಸ್ಥಾಪನ ದಿನ: ವಾಯುವ್ಯ ಸಾರಿಗೆ ಸಂಸ್ಥೆ ಈ ಮೊದಲು ಕೆಎಸ್ಆರ್ಟಿಸಿ ವ್ಯಾಪ್ತಿಗೆ ಒಳಪಟ್ಟಿತ್ತು. ನವೆಂಬರ್ 1, 1997 ರಂದು ವಾಯುವ್ಯ ಕರ್ನಾಟಕ ಭಾಗದ ಜನರಿಗೆ ಸಾರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರತ್ಯೇಕ ವಿಭಾಗ ಮಾಡಲಾಯಿತು. ಈ ವಿಭಾಗದ 27ನೇ ವರ್ಷದ ಸಂಭ್ರಮಾಚರಣೆ ಆಚರಿಸಿಕೊಳ್ಳುತ್ತಿದೆ. ಸಾರಿಗೆ ಸಚಿವ ರಾಮಲಿಂಗಪ್ಪ ರೆಡ್ಡಿ ನೂತನ ಬಸ್‌ಗಳಿಗೆ ಚಾಲನೆ ನೀಡಲಿದ್ದಾರೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಲಿದ್ದಾರೆ.