ನವದೆಹಲಿ: ಭಾರತದಲ್ಲಿ ವಾರ್ಷಿಕ 50 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಘೋಷಿಸುವ ವ್ಯಕ್ತಿಗಳ ಸಂಖ್ಯೆ 2023-24ರಲ್ಲಿ 9.39 ಲಕ್ಷಕ್ಕೆ ಏರಿಕೆಯಾಗಿದೆ. ಇದು 2013-14ರಲ್ಲಿ ಇದ್ದ 1.85 ಲಕ್ಷದಿಂದ ಐದು ಪಟ್ಟು ಹೆಚ್ಚಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
50 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವ ವ್ಯಕ್ತಿಗಳಿಂದ ಸರ್ಕಾರಕ್ಕೆ ಬರುವ ಆದಾಯ ತೆರಿಗೆಯು 2014 ರಲ್ಲಿ ಇದ್ದ 2.52 ಲಕ್ಷ ಕೋಟಿ ರೂ.ಗಳಿಂದ 2024 ರಲ್ಲಿ 9.62 ಲಕ್ಷ ಕೋಟಿ ರೂ.ಗೆ 3 ಪಟ್ಟು ಹೆಚ್ಚಾಗಿದೆ. ನರೇಂದ್ರ ಮೋದಿ ಸರ್ಕಾರದ ಬಲವಾದ ತೆರಿಗೆ ವಂಚನೆ ವಿರೋಧಿ ಕ್ರಮಗಳಿಂದಾಗಿ ವಾರ್ಷಿಕ 50 ಲಕ್ಷ ರೂ.ಗಿಂತ ಹೆಚ್ಚಿನ ಆದಾಯದ ಐಟಿಆರ್ ಸಲ್ಲಿಸುವ ಜನರ ಸಂಖ್ಯೆ ಹೆಚ್ಚಾಗಿದೆ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
2013-14ರಲ್ಲಿ ಸುಮಾರು 3.60 ಕೋಟಿ ಇದ್ದ ಆದಾಯ ತೆರಿಗೆ ರಿಟರ್ನ್ಸ್ ಸಂಖ್ಯೆ 2023-24ರಲ್ಲಿ 7.97 ಕೋಟಿಗೆ ಏರಿಕೆಯಾಗಿದೆ. ಇದು ದಶಕದಲ್ಲಿ ಶೇಕಡಾ 121 ರಷ್ಟು ಹೆಚ್ಚಳವಾಗಿದೆ.
ಕಡಿಮೆ ಆದಾಯ ಹೊಂದಿರುವವರಿಗಿಂತ ಹೆಚ್ಚಿನ ಆದಾಯ ಹೊಂದಿರುವವರು ಹೆಚ್ಚಿನ ತೆರಿಗೆಯನ್ನು ಪಾವತಿಸಬೇಕಾಗಿರುವುದರಿಂದ ನೇರ ತೆರಿಗೆಗಳನ್ನು ಹಣ ಸಂಗ್ರಹಿಸುವ ಪ್ರಗತಿಪರ ಮಾರ್ಗವಾಗಿ ನೋಡಲಾಗುತ್ತದೆ. ಕಳೆದ 10 ವರ್ಷಗಳಲ್ಲಿ ವರ್ಷಕ್ಕೆ 20 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ವ್ಯಕ್ತಿಗಳ ಮೇಲಿನ ತೆರಿಗೆ ಹೊರೆ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
10 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ತೆರಿಗೆದಾರರಿಂದ ಆದಾಯ ತೆರಿಗೆ ಸಂಗ್ರಹದ ಶೇಕಡಾವಾರು ಪ್ರಮಾಣವು 2014 ರಲ್ಲಿ ಪಾವತಿಸಿದ ಒಟ್ಟು ತೆರಿಗೆಯ ಶೇಕಡಾ 10.17 ರಿಂದ 2024 ರಲ್ಲಿ ಶೇಕಡಾ 6.22 ಕ್ಕೆ ಇಳಿದಿದೆ.
ಆಧುನಿಕ ತಂತ್ರಜ್ಞಾನದ ಬೆಂಬಲದೊಂದಿಗೆ ಹೆಚ್ಚು ಪರಿಣಾಮಕಾರಿ ತೆರಿಗೆ ವ್ಯವಸ್ಥೆಯಿಂದಾಗಿ, ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಹೆಚ್ಚುತ್ತಿರುವ ಆದಾಯದಿಂದಾಗಿ ಹೆಚ್ಚಿನ ಶ್ರೇಣಿಯ ತೆರಿಗೆದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಇದು ಆರ್ಥಿಕತೆಯಲ್ಲಿ ಲಭ್ಯವಿರುವ ಉತ್ತಮ ಮತ್ತು ಹೆಚ್ಚು ಸಂಬಳದ ಉದ್ಯೋಗಗಳ ಸಂಕೇತವಾಗಿದೆ ಎಂದು ಖಾಸಗಿ ವಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದಾಯ ತೆರಿಗೆ ರಿಟರ್ನ್ (ಐಟಿಆರ್) ಎಂಬುದು ಒಬ್ಬ ವ್ಯಕ್ತಿಯು ಭಾರತದ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಬೇಕಾದ ಒಂದು ಫಾರ್ಮ್ ಆಗಿದೆ. ಇದು ವ್ಯಕ್ತಿಯ ಆದಾಯ ಮತ್ತು ವರ್ಷದಲ್ಲಿ ಪಾವತಿಸಬೇಕಾದ ತೆರಿಗೆಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ : 12 ಲಕ್ಷ ಕೋಟಿಗೆ ತಲುಪಿದ ನಿವ್ವಳ ನೇರ ತೆರಿಗೆ ಸಂಗ್ರಹ: ಶೇ 15.4 ರಷ್ಟು ಏರಿಕೆ