KL Rahul:ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡದ ನಾಯಕನಾಗಿ ಕೆಲಕಾಲ ಆ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೆ.ಎಲ್.ರಾಹುಲ್ ಈ ಬಾರಿ ಐಪಿಎಲ್ ಮೆಗಾ ಹರಾಜು(IPL Mega Auction) ಪ್ರವೇಶಿಸಲಿದ್ದಾರೆ. ಅವರನ್ನು ಉಳಿಸಿಕೊಳ್ಳಲು ಎಲ್‌ಎಸ್‌ಜಿ ಆಸಕ್ತಿ ತೋರಿದ್ದರೂ, ರಾಹುಲ್ ಅದನ್ನು ನಿರಾಕರಿಸಿ ತಂಡದಿಂದ ಹೊರಬಂದಿದ್ದಾರೆ.
ಕಳೆದ ಸೀಸನ್ ಐಪಿಎಲ್ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಲಕ್ನೋ ತಂಡ ಹೀನಾಯವಾಗಿ ಸೋಲನುಭವಿಸಿತ್ತು. ಈ ಪಂದ್ಯದ ನಡುವೆ ಅಸಮಾಧಾನ ಹೊರಹಾಕಿದ್ದ ಲಕ್ನೋ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಸಾರ್ವಜನಿಕವಾಗಿಯೇ ರಾಹುಲ್ ವಿರುದ್ಧ ಕೋಪ ಹೊರಹಾಕಿದ್ದರು. ಈ ಘಟನೆಯಿಂದಾಗಿ ಗೊಯೆಂಕಾ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು. ನಂತರ ರಾಹುಲ್ ಲಕ್ನೋ ಫ್ರಾಂಚೈಸಿಯಿಂದ ದೂರವಿರಲು ನಿರ್ಧರಿಸಿದ್ದಾರೆ. ಇದೇ ಕಾರಣಕ್ಕಾಗಿಯೇ ಎಲ್‌ಎಸ್‌ಜಿ ತೊರೆಯಲಿದ್ದಾರೆ ಎಂದು ವರದಿಯಾಗಿದ್ದವು. ಆದರೆ ಈ ಬಗ್ಗೆ ಸ್ವತಃ ರಾಹುಲ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ರಾಹುಲ್ ಹೇಳಿಕೆ: ಕ್ರೀಡಾ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಲಕ್ನೋ ತೊರೆಯುತ್ತಿರುವ ಕುರಿತು ರಾಹುಲ್ ಮಾತನಾಡಿದ್ದಾರೆ. ಲಕ್ನೋವನ್ನು ತೊರೆಯಲು ಕಾರಣಗಳನ್ನು ಬಹಿರಂಗಪಡಿಸಿರುವ ಅವರು, ಈ ಬಾರಿ ನಾನು ಹೊಸ ಫ್ರಾಂಚೈಸಿ ಪರ ಆಡಲು ಬಯಸಿದ್ದೇನೆ. ಅಲ್ಲದೇ ನನಗೆ ಆಟವಾಡಲು ತಂಡದಲ್ಲಿ ಸ್ವಾತಂತ್ರ್ಯ ಬೇಕು. ಅದಕ್ಕಾಗಿಯೇ LSG ತೊರೆಯುತ್ತಿದ್ದೇನೆ. ತಂಡದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಇದ್ರೆ ಮಾತ್ರ ಆಡುತ್ತೇನೆ ಎಂದು ರಾಹುಲ್ ಹೇಳಿದ್ದಾರೆ.