ಬೆಂಗಳೂರು : ಲಂಚ ಕೇಳಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಅಧಿಕಾರಿಯನ್ನು ಅಮಾನತು ಮಾಡುತ್ತೇವೆ ಎಂದು ಅಬಕಾರಿ ಸಚಿವ ಆರ್. ಬಿ ತಿಮ್ಮಾಪುರ ಹೇಳಿದ್ದಾರೆ.
ವಿಧಾನಸೌಧದಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳ ಲಂಚದ ಆಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿದರು. ನಾನು ಇವತ್ತು ರೋಡ್ನಲ್ಲಿ ಬರುವಾಗ ವಿಚಾರ ಗೊತ್ತಾಯಿತು. ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು.
ಅಲ್ಲೊಂದು ಇಲ್ಲೊಂದು ಘಟನೆ ಆಗುತ್ತದೆ. ಅಂತಹ ಅಧಿಕಾರಿಗಳನ್ನ ಸಸ್ಪೆಂಡ್ ಮಾಡ್ತೇನೆ. ಸುಧಾರಣೆ ಮಾಡಬೇಕು, ತಪ್ಪು ಎಂಬ ಭಾವನೆಗೆ ಬಂದಿದ್ದೇನೆ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ತೇನೆ. 700 ಕೋಟಿ ಹಣ ಅಂತಾರೆ. ತಪ್ಪು ತಿಳಿವಳಿಕೆ ಕೊಟ್ಟು , ಪ್ರಧಾನಿ ಕೈಲಿ ಹೇಳಿಸಿದ್ದಾರೆ. ಕಾನೂನು ಕ್ರಮ ತೆಗೆದುಕೊಳ್ತೇವೆ. ಅಧಿಕಾರಿಗಳನ್ನು ಸಸ್ಪೆಂಡ್ ಮಾಡ್ತೇವೆ. ಹೆಂಗೇ ಹೋದರೂ ಅಧಿಕಾರಿಗಳು ಅಕ್ರಮ ಮಾಡ್ತಾರೆ. ಈ ಬಾರಿ ವರ್ಗಾವಣೆ ಕೂಡ ಮಾಡಲಿಲ್ಲ. 700 ಕೋಟಿಯ ಬಗ್ಗೆ ಪ್ರಧಾನಿಗಳು ಮಾತನಾಡುವ ಮಾತಲ್ಲ ಎಂದು ತಿಳಿಸಿದರು.
ತಲೆದಂಡದ ಪ್ರಶ್ನೆಯೇ ಬರುವುದಿಲ್ಲ : ಸಂಪುಟ ಪುನಾರಚನೆ ವಿಚಾರವಾಗಿ ಪ್ರತಿಕ್ರಿಯಿಸಿ, ಪಕ್ಷ ಹೇಳಿದಂತೆ ಕೇಳ್ತೇನೆ. ನನಗೆ ಯಾವುದೇ ಸೂಚನೆ ಬಂದಿಲ್ಲ. ಬಂದ ನಂತರ ಹೇಳ್ತೇನೆ. ನಮ್ಮನ್ನ ಏಕೆ ಕೈ ಬಿಡ್ತಾರೆ?. ಅಬಕಾರಿ ಇಲಾಖೆಯಲ್ಲಿ ಹಲವಾರು ಬದಲಾವಣೆ ತರುತ್ತೇನೆ, ಕಾದು ನೋಡಿ. ಕೌನ್ಸೆಲಿಂಗ್ ಮಾಡಬೇಕು, ಮಾಡ್ತೇವೆ. ಸರಿ ಮಾಡುವ ಕೆಲಸಕ್ಕೆ ಕೈ ಹಾಕಿದ್ದೇನೆ, ಮಾಡ್ತೇನೆ, ಇಲಾಖೆ ಕ್ಲೀನ್ ಮಾಡಬೇಕು ಮಾಡ್ತೇನೆ ಎಂದು ತಿಳಿಸಿದ್ದಾರೆ.
ತಲೆದಂಡ ಪ್ರಶ್ನೆ ಬರುವುದಿಲ್ಲ. ಆ ತರದ ತಪ್ಪು ನಾನೇನು ಮಾಡೇ ಇಲ್ಲ. ಅಂತ ಆರೋಪಗಳಿಗೆ ನಾನೇನು ಹೆದರುವುದಿಲ್ಲ. ಆ ತರದ ಆರೋಪಗಳೇನಿದ್ದರೂ ನಾನು ಎದುರಿಸುತ್ತೇನೆ. ನಾನೇನು ತಪ್ಪು ಮಾಡಿದ್ದೇನೆ?. ಯಾರೇ ತಪ್ಪು ಮಾಡಿದರೆ ಅಂತವರ ಮೇಲೆ ನಾನು ಕ್ರಮ ಕೈಗೊಳ್ಳುತ್ತೇನೆ. ಈ ತರದ ಆರೋಪಗಳು ಎಲ್ಲ ಸಚಿವರ ಮೇಲೆ ಬಂದಿದೆ ಎಂದು ಹೇಳಿದರು.
ಇದನ್ನೂ ಓದಿ : ಬಾರ್ ಲೈಸೆನ್ಸ್ಗೆ 20 ಲಕ್ಷ ಲಂಚದ ಬೇಡಿಕೆ ಆರೋಪ; ಮಂಡ್ಯ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು