ಬೆಂಗಳೂರು : ಭೂ ಮಂಜೂರಾತಿ ಸಮಿತಿ ಒಬ್ಬ ವ್ಯಕ್ತಿಗೆ ಭೂಮಿಯನ್ನು ಮಂಜೂರು ಮಾಡಲು ಶಿಫಾರಸು ಮಾಡಿದ ಬಳಿಕ ಅದಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಅವರು ಕಾನೂನು ಪ್ರಕಾರ ಸಾಗುವಳಿ ಚೀಟಿ (ಅನುದಾನ ಪ್ರಮಾಣಪತ್ರ) ವಿತರಣೆ ಮಾಡುವುದು ಆದ್ಯಕರ್ತವ್ಯವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.
ತನ್ನ ತಂದೆ ಪರವಾಗಿ ಭೂ ಮಂಜೂರಾತಿ ಸಮಿತಿಯ ಶಿಫಾರಸಿನಂತೆ ಸಾಗುವಳಿ ಚೀಟಿ ವಿತರಿಸಲು ತಹಶೀಲ್ದಾರ್‌ಗೆ ನಿರ್ದೇಶಿಸುವಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೆಗೌಡನ ಹಳ್ಳಿಯ ನಿವಾಸಿ ಎ.ವಿ. ಮುನಿಯಪ್ಪ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರು ಕರ್ನಾಟಕ ಭೂ ಕಂದಾಯ ನಿಯಮಗಳ ಸೆಕ್ಷನ್ 108ಡಿ(3) ಅಡಿಯಲ್ಲಿ ಈಗಾಗಲೇ ಭೂ ಮಂಜೂರಾತಿ ಸಮಿತಿಯಿಂದ ಕಾನೂನು ಬದ್ಧವಾಗಿ ಶಿಫಾರಸು ಪಡೆದುಕೊಂಡಿದ್ದಾರೆ. ಆ ಶಿಫಾರಸಅನ್ನು ತಹಶೀಲ್ದಾರ್ ಅವರು ಅಂಗೀಕರಿಸುವುದು ಮತ್ತು ನಿಗದಿತ ಕಾನೂನು ಕಾರ್ಯವಿಧಾನಕ್ಕೆ ಅನುಗುಣವಾಗಿ ಸಾಗುವಳಿ ಚೀಟಿ ವಿತರಣೆಗೆ ಮಾಡುವುದಕ್ಕೆ ಬಾಧ್ಯರಾಗಿರುತ್ತಾರೆ ಎಂದು ಪೀಠ ಹೇಳಿದೆ.
ಅಲ್ಲದೆ, ಈ ಪ್ರಕರಣದಲ್ಲಿ ಅರ್ಜಿದಾರರು ಕಾನೂನಿನ ಆದೇಶಿಸದಂತೆ ಅಗತ್ಯವಾದ ಮೊತ್ತವನ್ನು ಠೇವಣಿ ಇಡುವುದಕ್ಕೆ ಸಿದ್ಧರಿದ್ದಾರೆ. ಭೂ ಅನುದಾನ ಸಮಿತಿಯು ಅರ್ಜಿದಾರರ ತಂದೆ ಅನಧಿಕೃತವಾಗಿ ಬಳಕೆ ಮಾಡುತ್ತಿದ್ದ ಜಮೀನನ್ನು ಕ್ರಮ ಬದ್ಧಗೊಳಿಸಲು ಶಿಫಾರಸು ಮಾಡಿರುವುದರಿಂದ ಅರ್ಜಿದಾರರು ಈ ನ್ಯಾಯಾಲಯದಿಂದ ಸೂಕ್ತ ಆದೇಶವನ್ನು ಪಡೆಯುವ ಹಕ್ಕು ಹೊಂದಿದ್ದಾರೆ ಎಂದು ಪೀಠ ಹೇಳಿದೆ.
ಹೀಗಾಗಿ, ಅರ್ಜಿದಾರರ ಆಸ್ತಿಯ ಹಕ್ಕು ಪಡೆಯಲು ಅರ್ಹತೆ ಹೊಂದಿದ್ದಾರೆ. ಯಾವುದೇ ವಿಳಂಬ ದೋರಣೆ ಅನುಸರಿಸದೆ, ಕಾನೂನಿನ ಪ್ರಕಾರ ಸಾಗುವಳಿ ಚೀಟಿ ನೀಡಬೇಕು ಎಂದು ಪೀಠ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ವಕೀಲರ ವಾದ : ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಅರ್ಜಿದಾರರ ತಂದೆ ಅನಧಿಕೃತವಾಗಿ ಕೃಷಿ ಕಾರ್ಯಗಳನ್ನು ಮಾಡುತ್ತಿದ್ದ ಜಮೀನನ್ನು ಸಕ್ರಮಗೊಳಿಸಲು ಕೋರಿ ಭೂ ಮಂಜೂರಾತಿ ಸಮಿತಿಗೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯ ಕುರಿತು ವಿಚಾರಣೆ ನಡೆಸಿದ್ದ ಸಮಿತಿ ಅನಧಿಕೃತ ಜಮೀನನ್ನು ಅಧಿಕೃತ ಮಾಡಿಕೊಳ್ಳಲು ಅರ್ಜಿದಾರರ ತಂದೆ ಅರ್ಹರಾಗಿದ್ದಾರೆ ಎಂಬುದಾಗಿ ಶಿಫಾರಸು ನೀಡಿತ್ತು. ಆದರೆ, ಈ ಶಿಫಾರಸ್ಸಿನ ಪ್ರತಿಯೊಂದಿಗೆ ಅರ್ಜಿದಾರರು ಸಾಗುವಳಿ ಚೀಟಿಯನ್ನು ನೀಡುವಂತೆ ಕೋರಿ ತಹಶೀಲ್ದಾರ್ ಅವರಿಗೆ ಮನವಿ ಮಾಡಿದ್ದರು. ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ಶಿಫಾರಸು ಆಧಾರದಲ್ಲಿ ಭೂಮಿಗೆ ಸಾಗುವಳಿ ಚೀಟಿ ನೀಡಲು ನಿರ್ದೇಶನ ನೀಡಬೇಕು'' ಎಂದು ಕೋರಿದ್ದರು.
ಇದಕ್ಕೆ ಆಕ್ಷೇಪಿಸಿದ್ದ ಸರ್ಕಾರದ ವಕೀಲರು, ''ಅರ್ಜಿದಾರರು ಹೆಚ್ಚುವರಿ ಭೂಮಿ ಹೊಂದಿದ್ದಾರೆ. ಹೀಗಾಗಿ, ಅನಧಿಕೃತವಾಗಿ ಉಳಿಮೆ ಮಾಡುತ್ತಿರುವ ಭೂಮಿಯನ್ನು ಅಧಿಕೃತಗೊಳಿಸುವುದಕ್ಕೆ ಅವಕಾಶವಿಲ್ಲ. ಹೀಗಾಗಿ, ಅರ್ಜಿ ವಜಾಗೊಳಿಸಬೇಕು'' ಎಂದು ಮನವಿ ಮಾಡಿದ್ದರು.
ಇದನ್ನೂ ಓದಿ: ಪ್ರಕಾಶ್ ರಾಜ್ ಮಹಾಕುಂಭಮೇಳದಲ್ಲಿ ಮಿಂದೆದ್ದಿರುವ ಸುಳ್ಳು ಫೋಟೋ ಪ್ರಕಟ : ಪ್ರಶಾಂತ್ ಸಂಬರಗಿ ವಿರುದ್ಧದ ತನಿಖೆಗೆ ತಡೆ