Virat Kohli: ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಬಾರ್ಡರ್ - ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 295 ರನ್ಗಳ ಭರ್ಜರಿ ಗೆಲುವು ಸಾಧಿಸಿದ್ದು, ಇದೀಗ 2ನೇ ಟೆಸ್ಟ್ಗೆ ಸಿದ್ಧತೆ ನಡೆಸಿದೆ. ಕಾಂಗಾರೂ ಪಡೆ ವಿರುದ್ಧ ಡಿಸೆಂಬರ್ 6 ರಂದು ಹಗಲು ಮತ್ತು ರಾತ್ರಿ (Day and Night) ಪಿಂಕ್ ಬಾಲ್ ಪಂದ್ಯ ಆಡಲಿದೆ. ಈ ಮಹತ್ವದ ಪಂದ್ಯಕ್ಕೆ ಅಡಿಲೇಡ್ನ ಓವಲ್ ಮೈದಾನ ಆತಿಥ್ಯ ವಹಿಸಿಕೊಳ್ಳಲಿದೆ.
ಏತನ್ಮಧ್ಯೆ, ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ದಾಖಲೆ ಬರೆದಿದ್ದ ಕೊಹ್ಲಿಗೆ ಇದೀಗ ಎರಡನೇ ಪಂದ್ಯವೂ ಮಹತ್ವ ಪಡೆದುಕೊಂಡಿದೆ. ಅಡಿಲೇಡ್ ಮೈದಾನದಲ್ಲಿ ಯಾವೊಬ್ಬ ವಿದೇಶಿ ಆಟಗಾರನಿಗೆ ಸಾಧ್ಯವಾಗದ ದಾಖಲೆ ಬರೆಯಲು ವಿರಾಟ್ ಸಜ್ಜಾಗಿದ್ದಾರೆ. ಹೌದು ವಿರಾಟ್ ಅಡಿಲೇಡ್ ಓವಲ್‌ನಲ್ಲಿ ಇದುವರೆಗೆ 11 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 73.61ರ ಸರಾಸರಿಯಲ್ಲಿ 957 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 5 ಶತಕಗಳೂ ಸೇರಿವೆ.
ಇನ್ನು 43 ರನ್ ಗಳಿಸಿದರೆ? ಇದೀಗ ಎರಡನೇ ಟೆಸ್ಟ್ನಲ್ಲಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಇನ್ನು 43 ರನ್ ಗಳಿಸಿದರೆ, ಅಡಿಲೇಡ್ ಓವಲ್‌ನಲ್ಲಿ ಒಂದು ಸಾವಿರ ಅಂತಾರಾಷ್ಟ್ರೀಯ ರನ್ ಪೂರೈಸಲಿದ್ದಾರೆ. ಇದರೊಂದಿಗೆ ವಿರಾಟ್ ಅಡಿಲೇಡ್ ಓವಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ವಿದೇಶಿ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ. ಈ ಕ್ರಿಕೆಟ್ ಇತಿಹಾಸದಲ್ಲೆ ಅಡಿಲೇಡ್ ಓವಲ್‌ನಲ್ಲಿ ಇದೂವರೆಗೂ ಯಾವೊಬ್ಬ ವಿದೇಶಿ ಆಟಗಾರನೂ 1000 ರನ್ ಪೂರೈಸಿಲ್ಲ. ಕೊಹ್ಲಿ ಹೊರತುಪಡಿಸಿ ಬ್ರಿಯಾನ್ ಲಾರಾ ಈ ಮೈದಾನದಲ್ಲಿ 940 ರನ್ ಗಳಿಸಿದ್ದಾರೆ.
ವಿರಾಟ್ ಕೊಹ್ಲಿ ಅಡಿಲೇಡ್‌ನಲ್ಲಿ ಇದುವರೆಗೂ ಆಸ್ಟ್ರೇಲಿಯಾ ವಿರುದ್ಧ 4 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 63.62 ಸರಾಸರಿಯಲ್ಲಿ 509 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ ಮತ್ತು 1 ಅರ್ಧ ಶತಕ ಸೇರಿದೆ.
ಪರ್ತ್ನಲ್ಲಿ ಕೊಹ್ಲಿ ದಾಖಲೆ: ಪರ್ತ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದರು. 143 ಎಸೆತಗಳನ್ನು ಎದುರಿಸಿದ ಕೊಹ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಅಜೇಯ 100 ರನ್ ಗಳಿಸಿದರು. 16 ತಿಂಗಳು ಬಳಿಕ ಟೆಸ್ಟ್ನಲ್ಲಿ ಕೊಹ್ಲಿ ಸಿಡಿಸಿದ್ದ ಮೊದಲ ಶತಕ ಇದಾಗಿತ್ತು. ಇದರೊಂದಿಗೆ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿ ಬದುಕಿನಲ್ಲಿ 30ನೇ ಶತಕ ದಾಖಲಿಸಿದರು. ಜೊತೆಗೆ ಸರ್ ಡಾನ್ ಬ್ರಾಡ್ಮನ್ ಅವರನ್ನು ಹಿಂದಿಕ್ಕಿದರು. ಬ್ರಾಡ್ಮನ್ ಟೆಸ್ಟ್ನಲ್ಲಿ ಒಟ್ಟು 29 ಶತಕಗಳನ್ನು ಗಳಿಸಿದ್ದರು.
ಇದನ್ನೂ ಓದಿ: 28 ಎಸೆತಗಳಲ್ಲಿ ಸೆಂಚುರಿ! ಟಿ20ಯಲ್ಲಿ ಇತಿಹಾಸ ಸೃಷ್ಟಿಸಿದ ಐಪಿಎಲ್ Unsold ಬ್ಯಾಟರ್