ಮಂಗಳೂರು: ಫೇಸ್ಬುಕ್ನಲ್ಲಿ ಅಪರಿಚಿತೆಯ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ ಪರಿಣಾಮ ಮಂಗಳೂರಿನ ವ್ಯಕ್ತಿಯೊಬ್ಬರು 54,64,000 ರೂ. ಹಣವನ್ನು ಕಳೆದುಕೊಂಡಿದ್ದಾರೆ. ವಂಚನೆಗೊಳಗಾದ ವ್ಯಕ್ತಿ ಇದೀಗ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಂಗಳೂರಿನ ವ್ಯಕ್ತಿಯ ಫೇಸ್ಬುಕ್ ಖಾತೆಗೆ 2024ರ ಜುಲೈನಲ್ಲಿ ಆದಿತಿ ಕಪೂರ್ ಎಂಬ ಹೆಸರಿನ ಫ್ರೇಂಡ್ ರಿಕ್ವೆಸ್ಟ್ ಬಂದಿತ್ತು. ಇವರು ಫ್ರೇಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿಕೊಂಡು ಮೆಸೆಂಜರ್ನಲ್ಲಿ ಕಾಂಟ್ಯಾಕ್ಟ್ ನಲ್ಲಿದ್ದರು. ಬಳಿಕ ಆರೋಪಿ ಆದಿತಿ ಕಪೂರ್ ಮೆಸೆಂಜರ್ನಲ್ಲಿ +1 (623) 273-9277 ನೇ ನಂಬರ್ ಕಳುಹಿಸಿ, ಇದು ನನ್ನ ಪರ್ಸನಲ್ ನಂಬರ್, ಇದರಲ್ಲಿ ವಾಟ್ಸ್ಆ್ಯಪ್ ಇದ್ದು, ಕಾಲ್ ಮತ್ತು ಮೆಸೇಜ್ ಮಾಡಬಹುದು ಎಂದು ತಿಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅದರಂತೆ, ಚಾಟ್ ಮಾಡುತ್ತಿದ್ದ ವೇಳೆ 'Century Global Gold Capital'' ಎಂಬ ಇನ್ವೆಸ್ಟಮೆಂಟ್ ಫ್ಲಾನ್ ಇದೆ. ತಾನು ಕೂಡ ಇದರಲ್ಲಿ ಹೂಡಿಕೆ ಮಾಡಿದ್ದೇನೆ. ಒಳ್ಳೆಯ ರಿಟರ್ನ್ಸ್ ಬರುತ್ತದೆ ಎಂದು ತಿಳಿಸಿದ್ದಾಳೆ. ನೀವು ಹೂಡಿಕೆ ಮಾಡಿದ ಹಣವನ್ನು ಕೆಲವೇ ದಿನಗಳಲ್ಲಿ ನೀವು ಹೂಡಿಕೆ ಮಾಡಿದ ಹಣವನ್ನು 3 ಪಟ್ಟು ಜಾಸ್ತಿ ಮಾಡಿಕೊಡುವುದಾಗಿ ನಂಬಿಸಿ, ಹಣವನ್ನು ಹೂಡಿಕೆ ಮಾಡುವಂತೆ ಪ್ರಚೋದಿಸಿದ್ದಾರೆ.
ಬಳಿಕ ಆದಿತಿ ಕಪೂರ್ ಜುಲೈ ತಿಂಗಳಿನಲ್ಲಿ 'm.goldstradeapp.com' ಎಂಬ ಲಿಂಕ್ ಅನ್ನು ಕಳುಹಿಸಿ, ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮಾಡಿ 'm.goldstradeapp.com'ನಲ್ಲಿ ರಿಜಿಸ್ಟ್ರೇಷನ್ ಮಾಡಲು ತಿಳಿಸಿದ್ದಾಳೆ. ಅದರಂತೆ ಇವರು ರಿಜಿಸ್ಟ್ರೇಷನ್ ಮಾಡಿದ್ದಾರೆ. ಈ ವ್ಯಕ್ತಿಗೆ ಸೈಟ್ನಿಂದ UID:68043 ನೀಡಿದ್ದು, ಬಳಿಕ ಆರೋಪಿ ಆದಿತಿ ಕಪೂರ್, ಆನ್ಲೈನ್ನಲ್ಲಿ ಸೈಟ್ ಹೋಗಿ ಹಣವನ್ನು ವರ್ಗಾವಣೆ ಮಾಡಲು ತಿಳಿಸಿದಂತೆ, ಇವರು ಬೇರೆ ಬೇರೆ ದಿನಾಂಕಗಳಂದು ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 54,64,000 ರೂ. ಹಣ ವರ್ಗಾವಣೆ ಮಾಡಿರುವುದಾಗಿ ವ್ಯಕ್ತಿಯು ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಯು ಹಣವನ್ನು 3 ಪಟ್ಟು ಜಾಸ್ತಿ ಮಾಡಿಕೊಡುವುದಾಗಿ ನಂಬಿಸಿ, ಹಣ ಹಾಕಲು ಪ್ರೇರೇಪಿಸಿ, ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡ್ಡಿದ್ದಾಳೆ. ಹೂಡಿಕೆ ಮಾಡಿದ ಹಣವನ್ನು ವಾಪಸ್ ನೀಡದೇ ವಂಚನೆ ಮತ್ತು ಮೋಸ ಮಾಡಿದ್ದಾರೆ ಎಂದು ವಂಚನೆಗೊಗಾದ ವ್ಯಕ್ತಿ ದೂರು ನೀಡಿದ್ದಾರೆ.