ನವದೆಹಲಿ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಇಂಗ್ಲೆಂಡ್‌ನ ಹಿರಿಯ ಬೌಲರ್ ಜೇಮ್ಸ್ ಆ್ಯಂಡರ್ಸನ್ ಫ್ರಾಂಚೈಸಿ ಕ್ರಿಕೆಟ್ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಇವರು 10 ವರ್ಷಗಳ ಹಿಂದೆ ಕೊನೆಯ ಟಿ20 ಪಂದ್ಯ ಆಡಿದ್ದರು. ಇದೀಗ ಈ ಸ್ವರೂಪದಲ್ಲಿ ಪುನರಾಗಮನ ಮಾಡುವ ಇಚ್ಚೆ ವ್ಯಕ್ತಪಡಿಸಿದ್ದಾರೆ.
42 ವರ್ಷದ ಆ್ಯಂಡರ್ಸನ್ ಕಳೆದ ತಿಂಗಳು ಲಾರ್ಡ್ಸ್‌ನಲ್ಲಿ ಕೊನೆಯ ಟೆಸ್ಟ್ ಪಂದ್ಯ ಆಡಿದ ನಂತರ, ಇಂಗ್ಲೆಂಡ್‌ನ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಿವೃತ್ತಿಯ ಒಂದು ತಿಂಗಳ ನಂತರ, ಇಂಗ್ಲೆಂಡ್‌ನ ದೇಶೀಯ ಕ್ರಿಕೆಟ್ ಲೀಗ್ 'ದಿ ಹಂಡ್ರೆಡ್' ಟೂರ್ನಿಯಲ್ಲಿ ಆಡಲು ಯೋಚಿಸುತ್ತಿದ್ದಾರೆ. ಆದರೆ ಇತರೆ ಸ್ವರೂಪಗಳಲ್ಲೂ ಆಡುವ ಬಗ್ಗೆ ಇನ್ನೂ ದೃಢ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದೂ ಪ್ರೆಸ್ ಅಸೋಸಿಯೇಷನ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಒಂದು ವೇಳೆ ಅವರು ಫಿಟ್ ಆಗಿದ್ದರೆ, ಹಂಡ್ರೆಡ್ ಮುಂದಿನ ಋತುವಿನಲ್ಲಿ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ವಿಂಗ್ ಬೌಲಿಂಗ್‌ಗೆ ಹೆಸರುವಾಸಿಯಾದ ಆ್ಯಂಡರ್ಸನ್, ಇಂಗ್ಲೆಂಡ್ ಪರ 194 ODI ಮತ್ತು 19 T20 ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೇ ಇಂಗ್ಲೆಂಡ್‌ನ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರು. ಎರಡು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನದಲ್ಲಿ 188 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ 704 ವಿಕೆಟ್ಗಳನ್ನು ಪಡೆದಿದ್ದು 2.79 ಎಕಾನಮಿ ಹೊಂದಿದ್ದಾರೆ.
ಇದನ್ನೂ ಓದಿ:ಒಲಿಂಪಿಕ್ಸ್ ತಯಾರಿಗೆ ₹1.5 ಕೋಟಿ ಹಣ ಯಾರಿಂದ ಪಡೆದಿದ್ದೇವೆ?: ಅಶ್ವಿನಿ ಪೊನ್ನಪ್ಪ ಕಿಡಿ - Ashwini Ponnappa