ನವದೆಹಲಿ: 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಟೀಂ ಇಂಡಿಯಾದಿಂದ ಹೊರಗುಳಿದಿರುವ ಭಾರತದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಈ ವರ್ಷದ ಕೊನೆಯಲ್ಲಿ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ನ ಕಾರ್ಯದರ್ಶಿ ಜಯ್ ಶಾ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಮೂಲಕ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ಮಹತ್ವದ ಟ್ರೋಫಿಗಾಗಿ ನಮ್ಮ ತಂಡವೂ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮುಂದಿನ ಮಹತ್ವದ ಪಂದ್ಯಗಳಿಗಾಗಿ ಜಸ್ಪ್ರೀತ್ ಬುಮ್ರಾ ಅವರಿಗೂ ಕೆಲ ಸಮಯ ವಿಶ್ರಾಂತಿ ನೀಡಲಾಗಿದೆ. ಮೊಹಮ್ಮದ್ ಶಮಿ ಕೂಡ ಫಿಟ್ ಆಗಲಿದ್ದಾರೆ. ಈ ಬಾರಿ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಅನುಭವಿ ಆಟಗಾರನ್ನೊಳಗೊಂಡ ಬಲಿಷ್ಠ ತಂಡ ಆಸ್ಟ್ರೇಲಿಯಾಗೆ ಪ್ರಯಾಣಿಸಲಿದೆ ಎಂದು ತಿಳಿಸಿದ್ದಾರೆ.
ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಇತ್ತೀಚೆಗೆ, ಶಮಿ ಬಾಂಗ್ಲಾದೇಶ ಟೆಸ್ಟ್ ಸರಣಿಗಾಗಿ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು, ಆದರೆ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ಪ್ರಕಾರ, 'ಶಮಿ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಬೇಕಾದರೆ ಅದಕ್ಕೂ ಮುನ್ನ ತಮ್ಮ ಫಿಟ್ನೆಸ್ ಸಾಬೀತುಪಡಿಸಬೇಕಿದೆ. ಇದಕ್ಕಾಗಿ ಅವರು ರಣಜಿ ಟ್ರೋಫಿ ಆಡಬೇಕಾಗುತ್ತದೆ ಎಂದು ಹೇಳಿದ್ದಾರೆ.