ಹೈದರಾಬಾದ್: ಕಳೆದ ವರ್ಷ ನಡೆದ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಸ್ಟಾರ್ ಶೂಟರ್ ಮನು ಬಾಕರ್ ಅವರು ಎರಡು ಕಂಚಿನ ಪದಕಗಳನ್ನು ಜಯಿಸಿದ್ದರು. ಅವುಗಳೀಗ ಹೊಳಪು ಕಳೆದುಕೊಂಡಿವೆ. ಈ ಬಗ್ಗೆ ಆಯೋಜಕರಿಗೆ ದೂರು ನೀಡಲಾಗಿದೆ.
ಪದಕಗಳ ಬಣ್ಣ ಹಾಳಾಗಿದೆ ಎಂದು ಮನು ಬಾಕರ್ ಸೇರಿದಂತೆ ವಿಶ್ವದ ಹಲವು ಕ್ರೀಡಾಪಟುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಂಚಿಕೊಂಡು ದೂರಿದ್ದಾರೆ. ಈ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಯು (ಐಒಸಿ) ಗಮನಿಸಿದ್ದು, ಪದಕಗಳನ್ನು ಬದಲಿಸುವ ಭರವಸೆ ನೀಡಿತ್ತು.
ಹಳೆಯ ಬದಲು ಹೊಸ ಪದಕ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕಗಳನ್ನು ಮಾಡಿಕೊಟ್ಟಿದ್ದ ಮೊನೈ ಡಿ ಪ್ಯಾರಿಸ್ (ಫ್ರೆಂಚ್ ಸ್ಟೇಟ್ ಮಿಂಟ್) ಕ್ರೀಡಾಪಟುಗಳ ದೂರಿನ ಬಳಿಕ ಹೊಸ ಪದಕಗಳನ್ನು ನೀಡುವುದಾಗಿ ಹೇಳಿದೆ. ನೀಡಲಾಗಿರುವ ಪದಕಗಳ ಮಾದರಿಯಲ್ಲೇ ಹೊಸತು ತಯಾರಿಸಿ ಮುಂದಿನ ವಾರದಲ್ಲಿ ಕೈ ಸೇರುವಂತೆ ಮಾಡುವುದಾಗಿ ತಿಳಿಸಿದೆ.
ಮೊನೈ ಡಿ ಪ್ಯಾರಿಸ್ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದು, ಇದು ನಾಣ್ಯ ಸೇರಿದಂತೆ ಇತರ ಕರೆನ್ಸಿಗಳನ್ನು ತಯಾರು ಮಾಡುತ್ತದೆ. 2024ರ ಪ್ಯಾರಿಸ್ ಒಲಿಂಪಿಕ್ಸ್ಗಾಗಿ ಒಟ್ಟು 5,084 ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಅದು ತಯಾರಿಸಿತ್ತು. ಎಲ್ಲ ಪದಕಗಳಲ್ಲಿ ವಿಶ್ವಪ್ರಸಿದ್ಧ ಐಫೆಲ್ ಟವರ್ನ ಕಬ್ಬಿಣದ ತುಣುಕನ್ನು ಬಳಸಲಾಗಿದೆ.
ಡಬಲ್ ಪದಕ ಸುಂದರಿ: ಇನ್ನು, ಗುರಿಗಾರ್ತಿ ಮನು ಬಾಕರ್ ಅವರು ಒಂದೇ ಒಲಿಂಪಿಕ್ಸ್ನಲ್ಲಿ ಎರಡು ಪದಕ ಗಳಿಸಿದ ಭಾರತದ ಮೊದಲ ಮಹಿಳಾ ಕ್ರೀಡಾಪಟುವಾಗಿದ್ದಾರೆ. ವೈಯಕ್ತಿಕ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸುವ ಮೂಲಕ ಅವರು ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಖಾತೆಯನ್ನು ತೆರೆದಿದ್ದರು. ನಂತರ ಸರಬ್ಜೋತ್ ಸಿಂಗ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಮತ್ತೊಂದು ಕಂಚಿನ ಪದಕ ಗೆದ್ದಿದ್ದರು.
ಮನು ಬಾಕರ್ ಅವರ ಈ ಸಾಧನೆಯನ್ನು ಗಮನಿಸಿ, ಭಾರತ ಸರ್ಕಾರವೂ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಖೇಲ್ ರತ್ನ ಪ್ರಶಸ್ತಿ ಘೋಷಿಸಿದೆ. ಜನವರಿ 17 ರಂದು ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಲಿದ್ದಾರೆ.