ನವದೆಹಲಿ:ಐಪಿಎಲ್ನಲ್ಲಿ ಈಚೆಗೆ ಬೌಲರ್ಗಳಿಗೆ ಹೆಚ್ಚು ಮನ್ನಣೆ ಸಿಗುತ್ತಿಲ್ಲ. ಹೊಡಿಬಡಿ ಆಟದಲ್ಲಿ ಬ್ಯಾಟರ್ಗಳೇ ರಾರಾಜಿಸುತ್ತಿದ್ದಾರೆ. ವಿಕೆಟ್ ಪಡೆಯಲು ಎಂತಹ ಮಾರಕ ಬೌಲರ್ ಕೂಡ ಪರದಾಡಬೇಕಿದೆ. ಕ್ರಿಕೆಟ್ನ ನಿಯಮಗಳು ಬೌಲರ್ಗಳಿಗೆ ಸಹಕಾರಿಯಾಗಿಲ್ಲ ಎಂಬ ಮಾತಿದೆ. ಇಂತೆಲ್ಲ ಲೋಪದ ನಡುವೆಯೂ ಯಶ್ ದಯಾಳ್ ಎಂಬ ಯುವ ಬೌಲರ್ ಕ್ರಿಕೆಟ್ನ ಕಣ್ಣು ಕುಕ್ಕಿಸಿದ್ದಾರೆ. ಒಂದೇ ರಾತ್ರಿಯಲ್ಲಿ ಕ್ರಿಕೆಟ್ನ ಕಣ್ಮಣಿಯಾಗಿದ್ದಾರೆ.
ಅದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ. ಅಲ್ಲಿ ಎರಡು ಬದ್ಧವೈರಿಗಳಾದ ಸಿಎಸ್ಕೆ ಮತ್ತು ಆರ್‌ಸಿಬಿ ನಡುವೆ ಪಂದ್ಯ. ಪ್ಲೇಆಫ್ಗೆ ಕ್ವಾಲಿಫೈ ಆಗಲು ಇತ್ತಂಡಗಳೂ ಮದಗಜಗಳಂತೆ ಹೋರಾಟ ನಡೆಸುತ್ತಿದ್ದವು. ಕೊನೆಯ ಓವರ್ ಎಸೆಯಲು ಬಂದ ಯಶ್ ದಯಾಳ್, ಪಂದ್ಯವನ್ನು ಮಿಂಚಿನಂತೆ ಗೆಲ್ಲಿಸಿ ಆರ್ಸಿಬಿಯ ಕೋಟ್ಯಂತರ ಅಭಿಮಾನಿಗಳಿಗೆ ದಯಾಳುವಾಗಿ ಕಂಗೊಳಿಸಿದರು.
ರೋಚಕ ಪಂದ್ಯ:ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ಗೆ ಅರ್ಹತೆ ಪಡೆಯಲು 6 ಎಸೆತಗಳಲ್ಲಿ 17 ರನ್ ಅಗತ್ಯವಿದ್ದಾಗ, ಬೌಲ್ ಕೈಗೆತ್ತಿಕೊಂಡ ಯಶ್ ದಯಾಳ್ ಸುತ್ತಲೂ ಕೂಗುತ್ತಿದ್ದ ಅಭಿಮಾನಿಗಳ ಆಸೆಗೆ ನೀರೆರೆಯುವ ಕೆಲಸ ಮಾಡಬೇಕಿತ್ತು. ಮೊದಲ ಎಸೆತದಲ್ಲೇ ಧೋನಿ ಭರ್ಜರಿ ಸಿಕ್ಸರ್ ಬಾರಿಸಿದಾಗ ಎಲ್ಲರ ಎದೆ ಒಮ್ಮೆ ಧಸಕ್ ಎಂದಿತು. 5 ಎಸೆತಗಳಲ್ಲಿ 12 ರನ್. ಇನ್ನೇನು ಪಂದ್ಯ ಕೈಬಿಟ್ಟಿತು. ಪ್ಲೇಆಫ್ ಆಸೆ ನುಚ್ಚು ನೂರಾಯಿತು ಎಂದುಕೊಂಡಿದ್ದ ಅಭಿಮಾನಿಗಳಿಗೆ ಯಶ್ ದಯಾಳ್ ಕನಸಿನ ಗೆಲುವು ತಂದುಕೊಟ್ಟರು.
ಇನ್ನುಳಿದ ಐದು ಎಸೆತಗಳಲ್ಲಿ ಧೋನಿ ವಿಕೆಟ್ ಸಹಿತ ಬಿಟ್ಟುಕೊಟ್ಟಿದ್ದು ಕೇವಲ 1 ರನ್ ಮಾತ್ರ. ಇದರಿಂದ ತಂಡ 10 ರನ್ಗಳಿಂದ ಮಣಿಸಿ ರಾಜಾರೋಷವಾಗಿ ಟಾಪ್ ನಾಲ್ಕರಲ್ಲಿ ಸ್ಥಾನ ಪಡೆಯಿತು. ಇದೆಲ್ಲವನ್ನೂ ಸಾಧಿಸಿ ತೋರಿಸಿದ್ದು, ಕಳೆದ ಬಾರಿಯ ಆವೃತ್ತಿಯಲ್ಲಿ ಆಘಾತಕ್ಕೆ ಸಿಲುಕಿ ಟೂರ್ನಿಯಿಂದಲೇ ಹೊರಬಿದ್ದಿದ್ದ ಯಶ್ ದಯಾಳ್.