ಹೈದರಾಬಾದ್: ಐಪಿಎಲ್ನ ಮತ್ತೊಂದು ಪಂದ್ಯ ಭಾರೀ ರೋಚಕ ಅನುಭವಕ್ಕೆ ಸಾಕ್ಷಿಯಾಯಿತು. ಕೊನೆಯ ಎಸೆತದವರೆಗೂ ತೀವ್ರ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು 1 ರನ್ನಿಂದ ರಾಜಸ್ಥಾನ ರಾಯಲ್ ತಂಡದ ವಿರುದ್ಧ ಜಯ ಸಾಧಿಸಿತು.
ಗುರುವಾರ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕರಾಗಿ ಆಗಮಿಸಿದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಉತ್ತಮ ಅಡಿಪಾಯ ಹಾಕಲಿಲ್ಲ. 12 ರನ್ ಗಳಿಸಿ ಶರ್ಮಾ ಆವೇಶ್ ಖಾನ್ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಬಳಿಕ ಬಂದ ಅನ್ಮೋಲ್ ಪ್ರೀತ್ ಸಿಂಗ್ ಕೂಡ ಕೇವಲ 5 ರನ್ಗಳಿಸಿ ವಿಕೆಟ್ ನೀಡಿದರು.
ಬಳಿಕ ಹೆಡ್ಗೆ ನಿತೀಶ್ ರೆಡ್ಡಿ ಜೊತೆಯಾಗಿ ಉತ್ತಮ ಸ್ಕೋರ್ ಪೇರಿಸಿದರು. ಹೆಡ್ (58 ರನ್: 4x6, 6x3) ಗಳಿಸಿ ಔಟಾದರು. ಬಳಿಕ ಕ್ಲಾಸೇನ್, ನಿತೀಶ್ ಕುಮಾರ್ ರೆಡ್ಡಿ ಜೊತೆಯಾಗಿ 19 ಎಸೆತದಲ್ಲಿ 42 ರನ್ ಗಳಿಸಿದರು. ಕ್ರೀಸ್ನಲ್ಲಿ ಕೊನೆಯವರೆಗೂ ಗಟ್ಟಿಯಾಗಿ ನಿಂತು ಬೌಲರ್ಗಳನ್ನು ದಂಡಿಸಿದ ನಿತೀಶ್ ಕುಮಾರ್ (76: 4x3, 6x8) ಅರ್ಧ ಶತಕ ಸಿಡಿಸಿದರು. ಸನ್‌ರೈಸರ್ಸ್ ಮೂರು ವಿಕೆಟ್‌ಗೆ 201 ರನ್ ಕಲೆಹಾಕಿತು.
ಈ ಗುರಿ ಬೆನ್ನತ್ತಿದ ರಾಜಸ್ಥಾನ ತಂಡಕ್ಕೆ ಭುವನೇಶ್ವರ ಕುಮಾರ್ ಮೊದಲ ಓವರ್ನಲ್ಲೇ ಆಘಾತ ನೀಡಿದರು. ತಂಡದ ಸ್ಕೋರ್ ಒಂದು ರನ್ ಆಗುವಷ್ಟರಲ್ಲಿ ಆರಂಭಿಕರಾದ ಜೋಸ್ ಬಟ್ಲರ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಅವರನ್ನು ಶೂನ್ಯಕ್ಕೆ ಪೆವಿಲಿಯನ್ಗೆ ಕಳುಹಿಸಿದರು. ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಕೂಡ ಯಶಸ್ವಿ ಜೈಸ್ವಾಲ್ (67ರನ್: 4x7, 6x2) ಮತ್ತು ರಿಯಾನ್ ಪರಾಗ್ (77 ರನ್: 4x8, 6x4) ಅದ್ಭುತ ಜೊತೆಯಾಟದಲ್ಲಿ 134 ರನ್ ಸೇರಿಸಿ, ತಂಡವನ್ನು ಗೆಲುವಿನ ದಂಡೆಗೆ ಕೊಂಡೊಯ್ಯಲು ಯತ್ನಿಸಿದರು.
ಇದನ್ನೂ ಓದಿ:ಟಿ20 ವಿಶ್ವಕಪ್ ಮಾದರಿ ಹೇಗಿರಲಿದೆ? ಟೀಂ ಇಂಡಿಯಾದ ಅಭಿಯಾನ ಯಾವಾಗ ಶುರು? - T20 World Cup
ಕ್ರೀಸ್ನಲ್ಲಿ ಭದ್ರವಾಗಿ ನಿಂತಿದ್ದ ಜೈಸ್ವಾಲ್ ಮತ್ತು ಪರಾಗ್ ಔಟಾದ ಬಳಿಕ ಬಳಿಕ. ಶಿಮ್ರಾನ್ ಹೆಟ್ಮೆಯರ್ (13) ಮತ್ತು ಧ್ರುವ್ ಜುರೇಲ್ (1) ಹೆಚ್ಚು ಹೊತ್ತು ನಿಲ್ಲದೆ ನಿರಾಸೆ ಮೂಡಿಸಿದರು. ಕೊನೆಯಲ್ಲಿರೋವ್ಮನ್ ಪೊವೆಲ್ 15 ಎಸೆತದಲ್ಲಿ 27 ರನ್ ಸಿಡಿಸಿ ಜಯಕ್ಕೆ ಹೋರಾಡಿದರೂ ಸಾಧ್ಯವಾಗಲಿಲ್ಲ.