ಹೈದರಾಬಾದ್:5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್ 2024ರ 17ನೇ ಆವೃತ್ತಿಯ ಪ್ಲೇ ಆಫ್ ರೇಸ್ನಿಂದ ಅಧಿಕೃತವಾಗಿ ಹೊರಬಿದ್ದ ಮೊದಲ ತಂಡವಾಗಿದೆ. ನಿನ್ನೆ(ಬುಧವಾರ) ನಡೆದ ಟೂರ್ನಿಯ 57ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸನ್‌ರೈಸರ್ಸ್ ಗೆಲುವು ಸಾಧಿಸುತ್ತಿದ್ದಂತೆ ಮುಂಬೈ ಪ್ಲೇ ಆಫ್ ಕನಸು ಭಗ್ನಗೊಂಡಿತು.
ಈ ಬಾರಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳ ಪೈಕಿ ಒಂದೆನಿಸಿಕೊಂಡಿದ್ದ ಮುಂಬೈ ಟೂರ್ನಿಯುದ್ದಕ್ಕೂ ಕಳಪೆ ಪ್ರದರ್ಶನ ತೋರಿತ್ತು. ಹಾರ್ದಿಕ್ ಪಾಂಡ್ಯ ನೇತೃತ್ವದ ಈ ತಂಡ ಇದುವರೆಗೂ ಆಡಿರುವ 12 ಪಂದ್ಯಗಳ ಪೈಕಿ ಕೇವಲ 4ರಲ್ಲಿ ಗೆದ್ದು 8 ಪಂದ್ಯಗಳಲ್ಲಿ ಪರಾಭವಗೊಂಡಿದೆ. ತನ್ನ ಕೊನೆಯ ಎರಡು ಲೀಗ್ ಪಂದ್ಯಗಳಲ್ಲಿ ಕೆಕೆಆರ್ ಮತ್ತು ಲಕ್ನೋ ತಂಡಗಳನ್ನು ಎದುರಿಸಲಿದೆ. ಈ ಎರಡೂ ಪಂದ್ಯಗಳನ್ನು ಗೆದ್ದರೂ ತಂಡದ ಬಳಿ ಕೇವಲ 12 ಅಂಕ ಮಾತ್ರ ಇರುತ್ತದೆ. ಹಾಗಾಗಿ ಇದರಿಂದ ಯಾವುದೇ ಲಾಭವಾಗದು.
ಐಪಿಎಲ್ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯರನ್ನು ಗುಜರಾತ್ನಿಂದ ವಾಪಸ್ ಕರೆತಂದು ಫ್ರಾಂಚೈಸಿ ನಾಯಕತ್ವ ಪಟ್ಟ ಕೊಟ್ಟಿತ್ತು. ಆದರೆ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ತೋರಲು ಮುಂಬೈಗೆ ಸಾಧ್ಯವಾಗಲಿಲ್ಲ. ತಂಡ ಹ್ಯಾಟ್ರಿಕ್ ಸೋಲು ಅನುಭವಿಸಿತು. ಅದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಸತತ ಎರಡು ಪಂದ್ಯ ಗೆದ್ದು ಗೆಲುವಿನ ಟ್ರ್ಯಾಕ್ಗೆ ಮರಳಿದಂತೆ ತೋರಿತಾದರೂ ಮುಂದಿನ ಪಂದ್ಯದಲ್ಲಿ ಸಿಎಸ್ಕೆ ವಿರುದ್ದ ಸೋತು ನಂತರದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆಲುವು ಸಾಧಿಸಿತ್ತು. ಇದಾದ ನಂತರ ಸತತ ನಾಲ್ಕೂ ಪಂದ್ಯಗಳಲ್ಲಿ ತಂಡ ಗೆಲುವನ್ನೇ ಮೆರೆತು ಅಂಕಪಟ್ಟಿಯಲ್ಲಿ 9ನೇ ಸ್ಥಾನ ತಲುಪಿ ಪ್ಲೇ ಆಫ್ ಕನಸು ಕೈಚೆಲ್ಲಿದೆ.
ಟಿ20 ನಂ1 ಬ್ಯಾಟರ್ ಸೂರ್ಯಕುಮಾರ್ ಯಾದವ್, ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ ಸೇರಿದಂತೆ ಅನೇಕ ಅನುಭವಿ ಆಟಗಾರರನ್ನು ತಂಡ ಹೊಂದಿದ್ದರೂ ಹಿನ್ನಡೆ ಅನುಭವಿಸಿರುವುದು ಅಭಿಮಾನಿಗಳಲ್ಲಿ ಬೇಸರ ತರಿಸಿದೆ.