ಕ್ರೀಡಾಂಗಣಕ್ಕೆ ಬಂದ ಅಭಿಮಾನಿಗಳು (ETV Bharat) ಬೆಂಗಳೂರು:ಐಪಿಎಲ್ನ 17ನೇ ಋತುವಿನಲ್ಲಿಯೇ ರಣರೋಚಕ ಕುತೂಹಲ ಮೂಡಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಅಭಿಮಾನಿಗಳು ಕ್ರೀಡಾಂಗಣದತ್ತ ಧಾವಿಸುತ್ತಿದ್ದಾರೆ. ಕ್ರಿಕೆಟ್ ಲೋಕವೇ ಎದುರು ನೋಡುತ್ತಿರುವ ಪಂದ್ಯಕ್ಕೆ ವರುಣರಾಯ ಅಡ್ಡಿಯಾಗುವ ಆತಂಕವೂ ಇದೆ.
ಸದ್ಯ ಬೆಂಗಳೂರಿನಲ್ಲಿ ವಾತಾವರಣ ತಿಳಿಯಾಗಿದೆ. ಅಲ್ಲಲ್ಲಿ ಮೋಡ ಕವಿದ ವಾತಾವರಣವೂ ಇದ್ದು, ಹವಾಮಾನ ಇಲಾಖೆಯ ಪ್ರಕಾರ ಸಂಜೆ 7 ರ ಬಳಿಕ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಪಂದ್ಯದ ಆರಂಭದ ಸಮಯ ಸಂಜೆ 7.30. ಪಂದ್ಯದ ಆರಂಭಕ್ಕೂ ಮೊದಲು ಮಳೆಯಾಗುವ ಭೀತಿ ಇದೆ. ಸಂಜೆ 7 ರಿಂದ ರಾತ್ರಿ 11 ಗಂಟೆ ನಡುವೆ ಗುಡುಗು ಸಹಿತ ಬಿರುಗಾಳಿ ಇರಲಿದ್ದು, ಶೇ.51 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈಗಾಗಲೇ ನಗರದ ಕೆಲವೆಡೆ ಮಧ್ಯಾಹ್ನದ ವೇಳೆ ಮಳೆಯಾಗಿದೆ. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಿಲ್ಲ. ಅದಾಗ್ಯೂ, ಸಹ ಸಂಜೆ ವೇಳೆಗೆ ಮಳೆ ಬೀಳುವ ನಿರೀಕ್ಷೆ ಇದೆ. ಇದು ಪಂದ್ಯಕ್ಕೆ ಸಹಜವಾಗಿಯೇ ಅಡ್ಡಿಯಾಗಲಿದೆ. ಮತ್ತೊಂದೆಡೆ ಮೈದಾನದತ್ತ ಆಗಮಿಸುತ್ತಿರುವ ಉಭಯ ತಂಡಗಳ ಅಭಿಮಾನಿಗಳು ವರುಣ ಅವಕೃಪೆ ತೋರದಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಸಬ್ ಏರ್ ಸಿಸ್ಟಂ ಗುಂಗು:ಮಳೆ ಬಂದರೂ, ಪಂದ್ಯಕ್ಕೆ ಅಡ್ಡಿಯಾಗದು ಎಂಬ ಭರವಸೆಯೂ ಅಭಿಮಾನಿಗಳಲ್ಲಿದೆ. ಇದಕ್ಕೆ ಕಾರಣ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಳವಡಿಸಲಾಗಿರುವ ಸಬ್ ಏರ್ ಸಿಸ್ಟಂ. ಇದು ಮಳೆ ನೀರನ್ನು ಅರ್ಧಗಂಟೆಯಲ್ಲಿಯೇ ಇಂಗುವಂತೆ ಮಾಡುತ್ತದೆ. ಮಳೆ ಭಾದಿಸಿದರೂ ಸಹ ಹೆಚ್ಚುಕಾಲ ಸುರಿಯದೇ ಇದ್ದರೆ ಸಬ್ ಏರ್ಸಿಸ್ಟಂ ಮೂಲಕ ಮೈದಾನವನ್ನು ಆದಷ್ಟು ಬೇಗ ಒಣಗಿಸಿ ಆಡಲು ಅನುವು ಮಾಡಿಕೊಡಲು ಕೆಎಸ್ಸಿಎ ಸಜ್ಜಾಗಿದೆ.
ಪ್ಲೇಆಫ್ಗಾಗಿ ಆರ್ಸಿಬಿಗಿರುವ ಹಾದಿ:ಆರ್ಸಿಬಿ ಪಂದ್ಯವನ್ನು ಗೆಲ್ಲುವುದಷ್ಟೇ ಅಲ್ಲ. ದೊಡ್ಡ ಅಂತರದಲ್ಲಿ ಗೆಲ್ಲುವ ಅನಿವಾರ್ಯವೂ ಇದೆ. ಅಂದರೆ, ಮೊದಲು ಬ್ಯಾಟ್ ಮಾಡಿದಲ್ಲಿ ತಂಡ ಕನಿಷ್ಠ 200 ರನ್ ಗಳಿಸಬೇಕು. ಬಳಿಕ ಸಿಎಸ್ಕೆ ತಂಡವನ್ನು 18 ರನ್ಗಳಿಂದ ಸೋಲಿಸಬೇಕು. ಸಿಎಸ್ಕೆ ಮೊದಲು ಬ್ಯಾಟ್ ಮಾಡಿದಲ್ಲಿ ಗುರಿಯನ್ನು 18.1 ಓವರ್ಗಳಲ್ಲಿ ದಾಟಿ ಗೆಲ್ಲಬೇಕು. ಇದ್ಯಾವುದೂ ಸಂಭವಿಸದೆ, ಪಂದ್ಯ ರದ್ದಾದಲ್ಲಿ ಆರ್ಸಿಬಿಯ ಕೋಟ್ಯಂತರ ಅಭಿಮಾನಿಗಳ ಕನಸು ನುಚ್ಚುನೂರಾಗಲಿದೆ. ತಲಾ 1 ಅಂಕ ಹಂಚಿಕೆಯಾಗಿ ಆರ್ಸಿಬಿ ಟೂರ್ನಿಯಿಂದ ಹೊರಬಿದ್ದು, ಸಿಎಸ್ಕೆ ನಾಲ್ಕನೇ ತಂಡವಾಗಿ ಪ್ಲೇ ಆಫ್ಗೇರಲಿದೆ.
ಇದನ್ನೂ ಓದಿ:ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ವರುಣ ಕಾಡಿದರೇನಂತೆ ಚಿನ್ನಸ್ವಾಮಿಯಲ್ಲಿದೆ ಸಬ್ ಏರ್ ವ್ಯವಸ್ಥೆ - Sub Air System in Chinnaswamy