ಬೀದರ್ : ಮಾಜಿ ಸಚಿವರು ಹಾಗೂ ಔರಾದ (ಬಿ) ಶಾಸಕರಾದ ಪ್ರಭು. ಬಿ ಚವ್ಹಾಣ್ ಅವರು ಸೋಮವಾರ ರೈತರೊಂದಿಗೆ ಎಳ್ಳು ಅಮಾವಾಸ್ಯೆ ಹಬ್ಬದಲ್ಲಿ ಪಾಲ್ಗೊಂಡರು.
ಸ್ವ-ಗ್ರಾಮ ಬೋಂತಿ ತಾಂಡಾದಲ್ಲಿನ ಕೃಷಿ ಜಮೀನಿಗೆ ತೆರಳಿ ಪೂಜೆ ನೆರವೇರಿಸಿ, ಚರಗ ಚಲ್ಲುವ ಮೂಲಕ ಭೂತಾಯಿಗೆ ನಮನ ಸಲ್ಲಿಸಿದರು. ಎಳ್ಳು ಅಮಾವಾಸ್ಯೆ ಹಬ್ಬ ರೈತರಿಗೆ ಸುಖ ಶಾಂತಿ, ನೆಮ್ಮದಿ ಕಲ್ಪಿಸಲಿ, ರೈತರ ಜೀವನ ಸಮೃದ್ಧವಾಗಲಿ ಎಂದು ದೇವರಲ್ಲಿ ಬೇಡಿಕೊಂಡರು.
ನಂತರ ಕುಟುಂಬಸ್ಥರು, ಗ್ರಾಮಸ್ಥರು, ಮುಖಂಡರು ಹಾಗೂ ಆತ್ಮೀಯರೊಂದಿಗೆ ಕುಳಿತು ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಭಜ್ಜಿಪಲ್ಯೆ, ಶೇಂಗಾ-ಎಳ್ಳಿನ ಹೋಳಿಗೆಯನ್ನು ಸೇವಿಸಿದರು. ಇದೇ ವೇಳೆ ಶಾಸಕರು ಹೊಲದಲ್ಲಿನ ಮರದಲ್ಲಿ ಜೋಕಾಲಿಯಾಡಿ ಖುಷಿ ಪಟ್ಟರು.
ನಂತರ ಔರಾದ (ಬಿ) ಹಾಗೂ ಕಮಲನಗರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ರೈತರೊಂದಿಗೆ ಹಬ್ಬ ಆಚರಿಸಿದರು. ಔರಾದ್ನಲ್ಲಿ ಶಿವರಾಜ ಅಲ್ಮಾಜೆ, ಲಾಧಾ ಗ್ರಾಮದಲ್ಲಿ ಶರಣಪ್ಪ ಮಿಠಾರೆ, ಚಾಂದೋರಿ ಸಂದೀಪ ಜಾಧವ್, ಹಕ್ಯಾಳದಲ್ಲಿ ಕಿರಣ ಪಾಟೀಲ ಅವರ ಹೊಲಗಳಿಗೆ ಭೇಟಿ ನೀಡಿದರು.
ಬಳಿಕ ಈ ಕುರಿತು ಮಾತನಾಡಿದ ಅವರು, ನಮ್ಮ ಭಾಗದಲ್ಲಿ ರೈತರು ಆಚರಿಸುವ ದೊಡ್ಡ ಹಬ್ಬಗಳಲ್ಲಿ ಎಳ್ಳು ಅಮಾವಾಸ್ಯೆ ಪ್ರಮುಖ ಹಬ್ಬವಾಗಿದೆ. ಎಲ್ಲ ರೈತರು ತಮ್ಮ ಹೊಲಗಳಿಗೆ ತೆರಳಿ ಭೂತಾಯಿಗೆ ಪೂಜೆ ಸಲ್ಲಿಸಿ ಕುಟುಂಬಸ್ಥರೊಂದಿಗೆ ಸಹಭೋಜನ ಮಾಡುವ ಅಪರೂಪದ ಹಬ್ಬ ಎಂದು ಬಣ್ಣಿಸಿದರು.
ಪ್ರತಿ ವರ್ಷ ನಾನು ರೈತರ ಜೊತೆಗೆ ಹಬ್ಬ ಆಚರಿಸುತ್ತಾ ಬಂದಿದ್ದೇನೆ. ಈ ವರ್ಷ ಕೂಡ ಔರಾದ(ಬಿ) ಹಾಗೂ ಕಮಲನಗರ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ರೈತರ ಹೊಲಗಳಿಗೆ ಭೇಟಿ ನೀಡಿ ಹಬ್ಬ ಆಚರಿಸಿದ್ದೇನೆ. ಇದು ಭೂಮಾತೆ ಹಾಗೂ ರೈತರ ಮಹತ್ವವನ್ನು ಸಾರುವ ಹಬ್ಬವಾಗಿದೆ ಎಂದು ಹೇಳಿದರು.
ನಾನು ಸದಾ ರೈತರ ಪರವಾಗಿ ಕೆಲಸ ಮಾಡುತ್ತಿದ್ದು, ಅವರ ಶ್ರೇಯಸ್ಸಿಗಾಗಿ ಮಾಡಬೇಕಾದ ಎಲ್ಲ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇನೆ. ಕೃಷಿ, ತೋಟಗಾರಿಕೆ ಹಾಗೂ ಮತ್ತಿತರೆ ಇಲಾಖೆಗಳಿಂದ ರೈತರಿಗಾಗಿ ಇರುವ ಎಲ್ಲ ಯೋಜನೆಗಳನ್ನು ರೈತರು ಸದುಪಯೋಗ ಪಡೆಯುವಂತೆ ಪ್ರೇರಣೆ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಧೊಂಡಿಬಾ ನರೋಟೆ, ಮಾರುತಿ ಚವ್ಹಾಣ, ರಾಮಶೆಟ್ಟಿ ಪನ್ನಾಳೆ, ಬಾಲಾಜಿ ಠಾಕೂರ್, ಮಂಜು ಸ್ವಾಮಿ, ಮಾದಪ್ಪ ಮಿಠಾರೆ, ಕೇರಬಾ ಪವಾರ್ ಸೇರಿದಂತೆ ಇತರರಿದ್ದರು.
ಇದನ್ನೂ ಓದಿ : ಬೀದರ್: ರೈತರೊಂದಿಗೆ ಎಳ್ಳು ಅಮಾವಾಸ್ಯೆ ಆಚರಿಸಿ ಜೋಕಾಲಿ ಆಡಿದ ಶಾಸಕ ಪ್ರಭು ಚವ್ಹಾಣ್ - Ellu amavasya