ಚೆನ್ನೈ(ತಮಿಳುನಾಡು):ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ 2024ರ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 63 ರನ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ. ಚೆನ್ನೈ 207 ರನ್‌ಗಳ ಬೃಹತ್ ಟಾರ್ಗೆಟ್ ನೀಡಿತು. ಮಾಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ ಶಿವಂ ದುಬೆ ಅರ್ಧಶತಕದಾಟವಾಡಿದರು. ಸಿಎಸ್‌ಕೆ ಆಟಗಾರರು ಸುರಿಸಿದ ರನ್ ಮಳೆಯಲ್ಲಿ ಗುಜರಾತ್ ಟೈಟಾನ್ಸ್ ಕೊಚ್ಚಿ ಹೋಯಿತು.
ಮೊದಲು ಬ್ಯಾಟ್ ಮಾಡಿದ ಸಿಎಸ್‌ಕೆ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 206 ರನ್ ಪೇರಿಸಿತು. ಯುವ ಬ್ಯಾಟರ್ ಶಿವಂ ದುಬೆ ಬಿರುಸಿನ ಅರ್ಧಶತಕ (23 ಎಸೆತಗಳಲ್ಲಿ 51 ರನ್: 2x4, 5x6) ಗಳಿಸಿದರೆ, ರಚಿನ್ ರವೀಂದ್ರ (20 ಎಸೆತಗಳಲ್ಲಿ 46 ರನ್: 6x4, 3x6) ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದರು. ನಾಯಕ ರುತುರಾಜ್ ಗಾಯಕ್ವಾಡ್ (46 ರನ್) ಬ್ಯಾಟಿಂಗ್ನಲ್ಲಿ ಮಿಂಚಿದರು.
ಗುಜರಾತ್ ಬೌಲರ್‌ಗಳಲ್ಲಿ ರಶೀದ್ ಖಾನ್, ಸಾಯಿ ಕಿಶೋರ್, ಸ್ಪೆನ್ಸರ್ ಜಾನ್ಸನ್ ಮತ್ತು ಮೋಹಿತ್ ಶರ್ಮಾ ತಲಾ 2 ವಿಕೆಟ್ ಪಡೆದರು.
ರಚಿನ್, ದುಬೆ ಆಕರ್ಷಕ ಬ್ಯಾಟಿಂಗ್:ಚೆನ್ನೈ ಇನಿಂಗ್ಸ್‌ನಲ್ಲಿ ರಚಿನ್ ಹಾಗೂ ದುಬೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಎಲ್ಲರ ಗಮನಸೆಳೆಯಿತು. ಇಬ್ಬರೂ ಒಟ್ಟಾಗಿ 200ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ ರನ್ ಗಳಿಸಿದರು. ರುತುರಾಜ್ ಗಾಯಕ್ವಾಡ್ ಸ್ಥಿರ ಪ್ರದರ್ಶನ ನೀಡಿದರು. ರಚಿನ್ ರವೀಂದ್ರ ಅವಕಾಶ ಸಿಕ್ಕಾಗಲೆಲ್ಲ ಚೆಂಡನ್ನು ಬೌಂಡರಿಗಟ್ಟುತ್ತಿದ್ದರು.
ಎಡವಿದ ಗುಜರಾತ್:ಗುಜರಾತ್ ತಂಡವು ಚೆನ್ನೈ ನೀಡಿದ ಟಾರ್ಗೆಟ್ ಮುಟ್ಟುವಲ್ಲಿ ಎಡವಿತು. ತಂಡವು 8 ವಿಕೆಟ್‌ಗೆ 143 ರನ್ ಗಳಿಸಲಷ್ಟೇ ಶಕ್ತವಾಯಿತು. ಇನಿಂಗ್ಸ್‌ನ ಮೂರನೇ ಓವರ್ನಲ್ಲಿ ನಾಯಕ ಗಿಲ್ (8 ರನ್) ವಿಕೆಟ್ ಒಪ್ಪಿಸಿದರು. ವೃದ್ಧಿಮಾನ್ ಸಹಾ (21 ರನ್), ವಿಜಯ್ ಶಂಕರ್ (12 ರನ್) ಮತ್ತು ಡೇವಿಡ್ ಮಿಲ್ಲರ್ (21 ರನ್) ಗಳಿಸಿದರು. ಸಾಯಿ ಸುದರ್ಶನ್ (31 ಎಸೆತಗಳಲ್ಲಿ 37 ರನ್: 3x4) ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಚೆನ್ನೈ ತಂಡದ ತುಷಾರ್ ದೇಶಪಾಂಡೆ (2/21), ದೀಪಕ್ ಚಹಾರ್ (2/28) ಮತ್ತು ಮುಸ್ತಾಫಿಜುರ್ (2/30) ಬಿಗು ಬೌಲಿಂಗ್ ದಾಳಿಯ ಮೂಲಕ ಗುಜರಾತ್ ಬಲ ಕುಗ್ಗಿಸಿದರು. ಮಥೀಶ ಪತಿರಾನ (1/29) ಪರಿಣಾಮಕಾರಿ ಬೌಲಿಂಗ್ ಮಾಡಿ ಮಿಂಚಿದರು.
ಇದನ್ನೂ ಓದಿ:ನವೆಂಬರ್ನಲ್ಲಿ ಆಸ್ಟ್ರೇಲಿಯಾಕ್ಕೆ ಹಾರಲಿರುವ ಟೀಮ್ ಇಂಡಿಯಾ: ಅಡಿಲೇಡ್ ಅಂಗಳದಲ್ಲಿ ಅಹರ್ನಿಶಿ ಟೆಸ್ಟ್ ಪಂದ್ಯ - India tour to Australia