ಹೈದರಾಬಾದ್: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೈದಾನದಲ್ಲಿ ಮಾತ್ರವಲ್ಲದೇ ಗಳಿಕೆಯಲ್ಲೂ ಅಗ್ರಸ್ಥಾನದಲ್ಲಿದ್ದಾರೆ. ವಿವಿಧ ಮೂಲಗಳಿಂದ ವಾರ್ಷಿಕ ಹೆಚ್ಚಿನ ಆದಾಯ ಗಳಿಸುವ ಕೊಹ್ಲಿ, ಅತೀ ಹೆಚ್ಚು ತೆರಿಗೆ ಪಾತಿಸುವ ಭಾರತೀಯ ಕ್ರಿಕೆಟರ್ ಕೂಡ ಆಗಿದ್ದಾರೆ.
ವಿರಾಟ್ ಕೊಹ್ಲಿ: ಫಾರ್ಚೂನ್ ಇಂಡಿಯಾ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 2023-24ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ಆಟಗಾರರಾಗಿದ್ದಾರೆ. ಸ್ಪೋರ್ಟ್ಸ್ ಐಕಾನ್‌ಗಳಲ್ಲಿ ಒಬ್ಬರಾಗಿರುವ ಕೊಹ್ಲಿ ಬರೋಬ್ಬರಿ 66 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ ಎಂದು ವರದಿಯಾಗಿದೆ. ಇದು ಪಾಕ್ ಬ್ಯಾಟರ್ ಬಾಬರ್ ಅಜಮ್ ಅವರ ಒಟ್ಟು ಆಸ್ತಿ (41 ಕೋಟಿ ರೂ)ಗಿಂತಲೂ ಅಧಿಕವಾಗಿದೆ. ಇದರೊಂದಿಗೆ ಅತಿ ಹೆಚ್ಚು ತೆರಿಗೆ ಪಾವತಿಸುವ ಭಾರತೀಯ ಸೆಲೆಬ್ರಿಟಿಗಳಲ್ಲಿ ಐದನೇಯವರಾಗಿದ್ದಾರೆ. ಈ ಪೈಕಿ ಬಾಲಿವುಡ್ ನಟ ಶಾರುಖ್ ಖಾನ್ (92 ಕೋಟಿ), ತಮಿಳು ನಟ ದಳಪತಿ ವಿಜಯ್ (80 ಕೋಟಿ), ಸಲ್ಮಾನ್ ಖಾನ್ (75 ಕೋಟಿ), ಅಮಿತಾಬ್ ಬಚ್ಚನ್ (71 ಕೋಟಿ) ಅಗ್ರ ನಾಲ್ಕು ಸ್ಥಾನಗಳಲ್ಲಿದ್ದಾರೆ.
ಎಂಎಸ್ ಧೋನಿ:ಟೀಂ ಇಂಡಿಯಾದ ಮಾಜಿ ನಾಯಕ ಎಂ ಎಸ್ ಧೋನಿ ಎರಡನೇ ಅತಿ ಹೆಚ್ಚು ತೆರಿಗೆ ಪಾವತಿಸುವ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರವೂ ಐಪಿಎಲ್‌ನಲ್ಲಿ ಮುಂದುವರೆದಿದ್ದಾರೆ. ಧೋನಿ ಕ್ರಿಕೆಟ್ ಹೊರತುಪಡಿಸಿ ಜಾಹೀರಾತುಗಳಿಂದಲೂ ಹೆಚ್ಚಿನ ಆದಾಯ ಗಳಿಸುತ್ತಾರೆ. 2023-24ರ ಆರ್ಥಿಕ ವರ್ಷದಲ್ಲಿ ಧೋನಿ 38 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ.