ನವದೆಹಲಿ: ಭಾರತದ ಬ್ಯಾಟಿಂಗ್ ದಿಗ್ಗಜರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇದೀಗ ನಿವೃತ್ತಿ ಅಂಚಿನಲ್ಲಿದ್ದಾರೆ. ಈ ಇಬ್ಬರು ದಿಗ್ಗಜರ ನಿವೃತ್ತಿಯ ಊಹಾಪೋಹಗಳ ಮಧ್ಯೆ ಭಾರತೀಯ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಟೀಂ ಇಂಡಿಯಾದ ಕಳಪೆ ಪ್ರದರ್ಶನ ಹೀಗೆ ಮುಂದುವರೆದರೆ, ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಸ್ಥಾನವು ಅಪಾಯಕ್ಕೆ ಸಿಲುಕಬಹುದು ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ.
ತಂಡದಲ್ಲಿರುವ ಹೆಚ್ಚಿನ ಆಟಗಾರರೊಂದಿಗೆ ಗಂಭೀರ್ ಸಂವಹನ ಸಾಧಿಸುವಲ್ಲಿ ವಿಫಲವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ರವಿಶಾಸ್ತ್ರಿ ಮತ್ತು ರಾಹುಲ್ ದ್ರಾವಿಡ್ ಅವರ ಕಾಲದಲ್ಲಿ ಆಟಗಾರರೊಂದಿಗೆ ಇದ್ದಷ್ಟು ಸಂವಹನವು ಈಗ ಉತ್ತಮವಾಗಿಲ್ಲ ಎಂದು ತಿಳಿದು ಬಂದಿದೆ. ಆದ್ದರಿಂದ ಡ್ರೆಸ್ಸಿಂಗ್ ರೂಂನಲ್ಲಿ ತಂಡದ ವಾತಾವರಣವನ್ನು ಕಾಪಾಡಿಕೊಳ್ಳುವುದು ನಾಯಕನಿಗೆ ಕಷ್ಟವಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ.
ದ್ರಾವಿಡ್ ಅವರ ಕೋಚಿಂಗ್ ಅವಧಿಯಲ್ಲಿ, ಆಟಗಾರರ ಆಯ್ಕೆ ಸೇರಿದಂತೆ ಇತರ ವಿಷಯಗಳ ಬಗ್ಗೆ ರೋಹಿತ್ ಶರ್ಮಾ ಆಟಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡುತ್ತಿದ್ದರು. ಆದರೆ, ಗಂಭೀರ್ ಅವರು ತಂಡದ ಕೋಚ್ ಆಗಿ ನೇಮಕವಾದ ಬಳಿಕ ರೋಹಿತ್ ಕೆಲ ಕಿರಿಯ ಆಟಗಾರರೊಂದಿಗೆ ಹೆಚ್ಚಾಗಿ ಸಂವಹನ ನಡೆಸಿಲ್ಲ ಎಂದು ಹೇಳಲಾಗುತ್ತಿದೆ.