ಹಾವೇರಿ: ದೇವಾಲಯದ ಕಳಸಾರೋಹಣದ ಸಂದರ್ಭದಲ್ಲಿ ಕ್ರೇನ್ ಬಕೆಟ್ ಕಟ್ ಆಗಿ ಬಿದ್ದು ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಶೇಷಗಿರಿ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ.
ಕ್ರೇನ್ ಬಕೆಟ್ ಮೇಲಿನಿಂದ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ವ್ಯಕ್ತಿಯನ್ನು 42 ವರ್ಷದ ಮಂಜು ಪಾಟೀಲ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಂಜು ಬಡಿಗೇರ್ ಎಂಬವರು ಗಂಭೀರ ಗಾಯಗೊಂಡಿದ್ದು, ಹಾನಗಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶೇಷಗಿರಿ ಗ್ರಾಮದಲ್ಲಿ ನಡೆಯುತ್ತಿದ್ದ ಗಂಗಾ ಪರಮೇಶ್ವರಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಈ ಘಟನೆ ಜರುಗಿದೆ. ಕಳಸ ಹಿಡಿದು ಕ್ರೇನ್ ಮೂಲಕ ದೇವಸ್ಥಾನದ ಗೋಪುರದ ಹತ್ತಿರ ಹೋಗುತ್ತಿದ್ದಂತೆ ಬಕೆಟ್ ಕಳಚಿ ಬಿದ್ದು ಘಟನೆ ನಡೆದಿದೆ. ಘಟನೆಯ ವಿಡಿಯೋವನ್ನು ಸ್ಥಳದಲ್ಲಿ ನೆರೆದಿದ್ದ ಜನರು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದ್ದಾರೆ.
ಅಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕ್ರೇನ್ ಮಾಲೀಕನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಶವ ಕೇರಳದ ಕುಖ್ಯಾತ ಕಳ್ಳನದ್ದು!