ನವದೆಹಲಿ: ಭಾರತ ಕ್ರಿಕೆಟ್ ತಂಡ ತನ್ನ ಮುಂದಿನ ಅಂತಾರಾಷ್ಟ್ರೀಯ ಸರಣಿಯನ್ನು ಬಾಂಗ್ಲಾದೇಶ ವಿರುದ್ಧ ಸೆಪ್ಟೆಂಬರ್ 19ರಿಂದ ಆಡಬೇಕಿದೆ. ಆದರೆ ಅದಕ್ಕೂ ಮುನ್ನ ಟೀಂ ಇಂಡಿಯಾದ ಆಟಗಾರರನ್ನು ಬುಚ್ಚಿ ಬಾಬು ಟೂರ್ನಿಯಲ್ಲಿ ನೋಡಬಹುದು. ಬುಚ್ಚಿ ಬಾಬು ರೆಡ್ ಬಾಲ್ ಪಂದ್ಯಾವಳಿಯಾಗಿದ್ದು, ಇದು ಆಗಸ್ಟ್ 15ರಿಂದ ಪ್ರಾರಂಭವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬುಚ್ಚಿ ಬಾಬು ಪಂದ್ಯಾವಳಿ ತನ್ನ ಹೊಳಪು ಕಳೆದುಕೊಂಡಿದೆ. ಆದರೆ ಈ ಹಿಂದೆ ಸೌರವ್ ಗಂಗೂಲಿಯಂತಹ ದಿಗ್ಗಜ ಆಟಗಾರರು ಈ ಕೆಂಪು ಚೆಂಡು ಪಂದ್ಯಾವಳಿಯಲ್ಲಿ ಆಡಿದ್ದರು. ಈ ಬಾರಿಯ ಟೂರ್ನಿಯಲ್ಲಿ ಯಾವೆಲ್ಲ ಆಟಗಾರರು ಭಾಗಿಯಾಗಲಿದ್ದಾರೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಸೂರ್ಯಕುಮಾರ್ ಯಾದವ್:ಬುಚ್ಚಿಬಾಬು ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಟೀಂ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಮುಂಬೈ ಪರ ಆಡಲಿದ್ದಾರೆ. ಸೂರ್ಯ ಅವರ ಆಪ್ತ ಮೂಲವೊಂದು ಇದನ್ನು 'ಈಟಿವಿ ಭಾರತ'ಕ್ಕೆ ಖಚಿತಪಡಿಸಿದೆ. 33 ವರ್ಷದ ಬಲಗೈ ಆಟಗಾರ ಸೂರ್ಯಕುಮಾರ್ ಯಾದವ್ ಮುಂಬೈ ತಂಡದಲ್ಲಿರಲಿದ್ದು, ತಂಡದ ನಾಯಕತ್ವವನ್ನು ಭಾರತದ ಯುವ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ವಹಿಸಲಿದ್ದಾರೆ.
ಇಶಾನ್ ಕಿಶನ್:ಭಾರತ ತಂಡದಿಂದ ಹೊರಗುಳಿದಿರುವ ಎಡಗೈ ಬ್ಯಾಟರ್ ಕಮ್ ವಿಕೆಟ್‌ಕೀಪರ್ ಇಶಾನ್ ಕಿಶನ್ ಬುಚ್ಚಿ ಬಾಬು ಪಂದ್ಯಾವಳಿಯಲ್ಲಿ ಮೈದಾನಕ್ಕಿಳಿಯಲಿದ್ದಾರೆ. ಜಾರ್ಖಂಡ್ ತಂಡವನ್ನು ಪ್ರತಿನಿಧಿಸುತ್ತಿರುವ ಅವರು ನಾಯಕರಾಗಿ ಜವಬ್ದಾರಿ ವಹಿಸಲಿದ್ದಾರೆ. ತಮಿಳುನಾಡಿನಲ್ಲಿ ನಡೆಯಲಿರುವ ಈ ದೇಶೀಯ ಪಂದ್ಯಾವಳಿಯಲ್ಲಿ ಇಶಾನ್ ತಮ್ಮ ಸಾಮರ್ಥ್ಯ ತೋರಿಸಲು ಸಜ್ಜಾಗಿದ್ದಾರೆ. ಇದಲ್ಲದೆ, ಮಾಧ್ಯಮ ವರದಿಗಳನ್ನು ಪ್ರಕಾರ, ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗುವ ದುಲೀಪ್ ಟ್ರೋಫಿಯಲ್ಲೂ ಇಶಾನ್ ಆಡಲಿದ್ದಾರೆ ಎನ್ನಲಾಗಿದೆ.
ಶ್ರೇಯಸ್ ಅಯ್ಯರ್:ಆಗಸ್ಟ್ 27ರಂದು ನಡೆಯಲಿರುವ ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಬುಚ್ಚಿ ಬಾಬು ಪಂದ್ಯಾವಳಿಯಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಮುಂಬೈ ಪರ ಆಡಲಿದ್ದಾರೆ. ಮುಂಬೈ ಕ್ರಿಕೆಟ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ದೀಪಕ್ ಪಾಟೀಲ್ ಅವರು ಮಂಗಳವಾರ ಬಿಡುಗಡೆ ಮಾಡಿರುವ ಮಾಧ್ಯಮ ಹೇಳಿಕೆಯಲ್ಲಿ, 'ತಮಿಳುನಾಡು ಕ್ರಿಕೆಟ್ ಸಂಸ್ಥೆ ಆಯೋಜಿಸಿರುವ ಬುಚ್ಚಿ ಬಾಬು ಪಂದ್ಯಾವಳಿಯಲ್ಲಿ ಶ್ರೇಯಸ್ ಅಯ್ಯರ್ ಮುಂಬೈ ತಂಡದಲ್ಲಿ ಆಡಲಿದ್ದಾರೆ. ಅವರು 27 ಆಗಸ್ಟ್ 2024ರಿಂದ ಕೊಯಮತ್ತೂರಿನಲ್ಲಿ ನಡೆಯಲಿರುವ ಮುಂಬೈ vs ಜಮ್ಮು ಮತ್ತು ಕಾಶ್ಮೀರ ಪಂದ್ಯದಲ್ಲಿ ಆಡಲಿದ್ದಾರೆ' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಬಾರ್ಡರ್-ಗವಾಸ್ಕರ್ ಟ್ರೋಫಿ: ಟೂರ್ನಿ ಆರಂಭಕ್ಕೂ ಇದುವೇ ವಿಜೇತ ತಂಡ ಎಂದ ಪಾಂಟಿಂಗ್! - Ricky Ponting Prediction