ಹೈದರಾಬಾದ್:ಪ್ಯಾರಿಸ್ ಒಲಿಂಪಿಕ್ 2024 ರ ಫೈನಲ್ ಪಂದ್ಯಕ್ಕೂ ಮುನ್ನ ಭಾರತದ ತಾರಾ ಕುಸ್ತಿಪಟು ವಿನೇಶ್ ಫೋಗಟ್ ಅವರು ನಿಗದಿತಕ್ಕಿಂತ 100 ಗ್ರಾಂನಷ್ಟು ಅಧಿಕ ತೂಕ ಹೊಂದಿದ್ದಕ್ಕಾಗಿ ಮಹಿಳೆಯರ 50 ಕೆಜಿ ಕುಸ್ತಿ ಸ್ಪರ್ಧೆಯ ಚಿನ್ನದ ಪದಕದ ಸ್ಪರ್ಧೆಯಿಂದ ಅನರ್ಹಗೊಳಿಸಲಾಯಿತು. ಇದರ ವಿರುದ್ಧ ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ನಡೆದಿದ್ದು, ಭಾನುವಾರ ಕೋರ್ಟ್ ತೀರ್ಪು ನೀಡಲಿದೆ.
ತಮ್ಮನ್ನು ಅನರ್ಹಗೊಳಿಸಿದ್ದಕ್ಕೆ ವಿನೇಶ್ ಫೋಗಟ್ ಅವರು ಎರಡು ಅಂಶಗಳನ್ನು ಕೋರ್ಟ್ನಲ್ಲಿ ಎತ್ತಿದ್ದಾರೆ. ಮೊದಲನೆಯದು ಫೈನಲ್ ಪಂದ್ಯ ಆರಂಭಕ್ಕೂ ಮೊದಲು ತಮ್ಮ ತೂಕವನ್ನು ಪರಿಶೀಲಿಸಬೇಕು. ಎರಡನೆಯದು ಜಂಟಿಯಾಗಿ ಬೆಳ್ಳಿ ಪದಕವನ್ನು ನೀಡಬೇಕು ಎಂದು ಅವರು ವಾದಿಸಿದ್ದಾರೆ. ಆದರೆ, ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು (ಸಿಎಎಸ್) ಮೊದಲ ಮನವಿಯನ್ನು ತಿರಸ್ಕರಿಸಿದೆ. ಎರಡನೆಯ ಮನವಿಯನ್ನು ಸ್ವೀಕರಿಸಿದ್ದು, ತೀರ್ಪು ಕಾಯ್ದಿರಿಸಿದೆ.
ಫೋಗಟ್ ಮೊದಲಲ್ಲ:ಭಾರತದ ಅಥ್ಲೀಟ್ಗಳು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಂದ ಅನರ್ಹಗೊಂಡಿರುವುದು ಇದೇ ಮೊದಲಲ್ಲ. ಸುಮಾರು 10 ಕ್ರೀಡಾಪಟುಗಳು ಪ್ರಮುಖ ಕ್ರೀಡಾಕೂಟಗಳಿಂದ ಅನರ್ಹಗೊಂಡಿದ್ದಾರೆ. ಯಾವ ಕ್ರೀಡೆಯಲ್ಲಿ, ಯಾವ ಪದಕಗಳಿಂದ ಅನರ್ಹರಾಗಿದ್ದಾರೆ ಎಂಬುದರ ಮಾಹಿತಿ ತಿಳಿಯೋಣ.
ಪದಕಗಳಿಂದ ವಂಚಿತರಾದ ಭಾರತೀಯರ ಪಟ್ಟಿ ಹೀಗಿದೆ
ಪರ್ವೀನ್ ಹೂಡಾ:ಪರ್ವೀನ್ ಹೂಡಾ ಅವರು ಪ್ಯಾರಿಸ್ ಒಲಿಂಪಿಕ್ ಆರಂಭಕ್ಕೂ ಮೊದಲು 57 ಕೆಜಿ ಕುಸ್ತಿ ತಂಡದ ಸ್ಪರ್ಧಾಳುವಾಗಿದ್ದರು. ಒಲಿಂಪಿಕ್ಗೆ ಆಯ್ಕೆಯಾದ ಭಾರತ ತಂಡದ ಸದಸ್ಯೆಯಾಗಿದ್ದ ಅವರನ್ನು ಡೋಪಿಂಗ್ ವೈಫಲ್ಯದ ಕಾರಣಕ್ಕಾಗಿ ಇಂಟರ್ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು(ಐಟಿಎ) ಅಮಾನತುಗೊಳಿಸಿತು. ಜೊತೆಗೆ 2022 ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಗಳಿಸಿದ್ದ ಕಂಚಿನ ಪದಕವನ್ನೂ ಕಿತ್ತುಕೊಳ್ಳಲಾಗಿತ್ತು.
ಸೀಮಾ ಅಂತಿಲ್:ಭಾರತದ ಡಿಸ್ಕಸ್ ಎಸೆತಗಾರ್ತಿ ಸೀಮಾ ಅಂತಿಲ್ ಅವರು ನಾಲ್ಕು ಬಾರಿ ಕಾಮನ್‌ವೆಲ್ತ್ ಕ್ರೀಡಾಕೂಟದ ಪದಕ ವಿಜೇತೆ. ಇವರೂ ಕೂಡ ಡೋಪಿಂಗ್ ನಡೆಸಿದ ಆರೋಪದ ಮೇಲೆ 2002 ರ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಗಳಿಸಿದ್ದ ಚಿನ್ನದ ಪದಕವನ್ನು ಕಳೆದುಕೊಂಡರು.
ಸುನಿತಾ ರಾಣಿ:ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ದೂರ ಓಟಗಾರ್ತಿ ಸುನೀತಾ ರಾಣಿ ಅವರು ಡೋಪಿಂಗ್ ಪರೀಕ್ಷೆಯಲ್ಲಿ ನಪಾಸಾದ ಕಾರಣ 2002 ರ ಏಷ್ಯನ್ ಗೇಮ್ಸ್ ಚಿನ್ನ (1,500 ಮೀ ಓಟ) ಮತ್ತು ಕಂಚಿನ (5,000 ಮೀ) ಪದಕವನ್ನು ಕಸಿದುಕೊಳ್ಳಲಾಯಿತು. ತನಿಖೆಯ ನಂತರ ಪದಕಗಳನ್ನು ಮರು ನೀಡಲಾಗಿತ್ತು.
ಅನಿಲ್ ಕುಮಾರ್ ಮತ್ತು ನೀಲಮ್ ಸಿಂಗ್:ಅರ್ಜುನ ಪ್ರಶಸ್ತಿ ಪುರಸ್ಕೃತ ಡಿಸ್ಕಸ್ ಎಸೆತಗಾರರಾದ ಅನಿಲ್ ಕುಮಾರ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಅಥ್ಲೀಟ್ ಆಗಿರುವ ನೀಲಮ್ ಸಿಂಗ್ ಅವರು ಡೋಪಿಂಗ್ ಆರೋಪದಲ್ಲಿ 2 ವರ್ಷ ಅಮಾನತುಗೊಂಡಿದ್ದರು. ಇಂಚಿಯಾನ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಿಂದ ಅನಿಲ್ ಕುಮಾರ್ ಅನರ್ಹಗೊಂಡರು. ಅವರ ಕಂಚಿನ ಪದಕವನ್ನು ಕಸಿದುಕೊಳ್ಳಲಾಯಿತು. ನೀಲಂ ಅವರು ಮ್ಯಾಂಚೆಸ್ಟರ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪಡೆದ ಬೆಳ್ಳಿ ಪದಕವನ್ನು ಕಳೆದುಕೊಂಡರು.
ಶಾಂತಿ ಸೌಂದರರಾಜನ್:ಕಾಂಟಿನೆಂಟಲ್ ಗೇಮ್ಸ್‌ನಲ್ಲಿ ಪದಕ ಗೆದ್ದ ಮೊದಲ ತಮಿಳು ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಶಾಂತಿ ಸೌಂದರಾಜನ್ ಅವರು 2006ರ ದೋಹಾ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 800 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ನಂತರ, ಲಿಂಗ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಕ್ಕಾಗಿ ಪದಕವನ್ನು ಕಳೆದುಕೊಂಡರು.
ಸೌರಭ್ ವಿಜ್:ಶಾಟ್‌ಪುಟ್ ಪಟು ಸೌರಭ್ ವಿಜ್ 2012 ರ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2010 ರಲ್ಲಿ ನವದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸ್ಥಾನ ಪಡೆದಿದ್ದರು. ಏಷ್ಯನ್ ಕ್ರೀಡಾಕೂಟದ ಒಂದು ತಿಂಗಳ ನಂತರ, ಅವರು ನಿಷೇಧಿತ ಉದ್ದೀಪನ ಮದ್ದು ಸೇವಿಸಿದ್ದಕ್ಕೆ ಎರಡು ವರ್ಷ ನಿಷೇಧಕ್ಕೆ ಒಳಗಾದರು. ಬಳಿಕ ಭಾರತದ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (ನಾಡಾ) ಕೆಲವೇ ವಾರಗಳಲ್ಲಿ ನಿಷೇಧ ತೆರವುಗೊಳಿಸಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿತು.
ಹರಿಕೃಷ್ಣನ್ ಮುರಳೀಧರನ್, ಮಂದೀಪ್ ಕೌರ್, ಸಿನಿ ಜೋಸ್, ಅಶ್ವಿನಿ ಅಕ್ಕುಂಜಿ:2011 ರಲ್ಲಿ ನಾಡಾ ಸಂಸ್ಥೆಯು ಆರು ಮಹಿಳಾ ಅಥ್ಲೀಟ್‌ಗಳ ಮೇಲೆ ಒಂದು ವರ್ಷದ ನಿಷೇಧವನ್ನು ವಿಧಿಸಿತು. ಲಾಂಗ್ ಜಂಪರ್ ಹರಿಕೃಷ್ಣ, ರಿಲೇ ತಂಡದ ಮಂದೀಪ್ ಕೌರ್, ಸಿನಿ ಜೋಸ್ ಮತ್ತು ಅಶ್ವಿನಿ ಅಕ್ಕುಂಜಿ ಅವರನ್ನು ನಿಷೇಧಿಸಿತ್ತು.
ಇದನ್ನೂ ಓದಿ:ಒಲಿಂಪಿಕ್ ಕುಸ್ತಿ ಪಂದ್ಯಗಳಲ್ಲಿ ಭಾರತ ಈವರೆಗೆ ಗೆದ್ದ ಪದಕಗಳೆಷ್ಟು ಗೊತ್ತಾ? - Paris Olympics 2024