India vs New Zealand, 1st Test: ನ್ಯೂಜಿಲೆಂಡ್ ವಿರುದ್ಧ ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕಳಪೆ ಪ್ರದರ್ಶನ ತೋರಿ ಅಲ್ಪಮೊತ್ತಕ್ಕೆ ಆಲೌಟ್ ಆಗಿದ್ದ ಟೀಂ ಇಂಡಿಯಾ, ಎರಡನೇ ಇನ್ನಿಂಗ್ಸ್ನಲ್ಲಿ ಕಮ್‌ಬ್ಯಾಕ್ ಮಾಡಿದೆ.
ಇಂದು ಮೂರನೇ ದಿನದಾಟದಂತ್ಯಕ್ಕೆ ರೋಹಿತ್ ಟೀಂ 3 ವಿಕೆಟ್ ನಷ್ಟಕ್ಕೆ 231ರನ್ ಕಲೆಹಾಕಿತು. ಇದರೊಂದಿಗೆ 125 ರನ್‌ಗಳ ಹಿನ್ನಡೆಯಲ್ಲಿದೆ. ರೋಹಿತ್ ಶರ್ಮಾ (52) ಮತ್ತು ವಿರಾಟ್ ಕೊಹ್ಲಿ (70) ಅರ್ಧಶತಕ ಸಿಡಿಸಿ ಪೆವಿಲಿಯನ್‌ಗೆ ನಿರ್ಗಮಿಸಿದ್ದು, ಸರ್ಫರಾಜ್ ಖಾನ್ (70*) ನಾಲ್ಕನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಕಿವೀಸ್ ಪರ ಅಜಾಜ್ ಪಟೇಲ್ ಮತ್ತು ಗ್ಲೆನ್ ಫಿಲಿಪ್ಸ್ ತಲಾ 1 ವಿಕೆಟ್ ಪಡೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಮೊದಲ ಇನಿಂಗ್ಸ್‌ನಲ್ಲಿ ಭಾರತ ಕೇವಲ 46 ರನ್ಗಳಿಗೆ ಸರ್ವಪತನ ಕಂಡಿತ್ತು. ನಂತರ ಬ್ಯಾಟ್ ಮಾಡಿದ್ದ ಕಿವೀಸ್ 402 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ರಚಿನ್ ರವೀಂದ್ರ (134) ಶತಕ ಸಿಡಿಸಿದರೆ, ಡೇವನ್ ಕಾನ್ವೆ (91) ಮತ್ತು ಟಿಮ್ ಸೌಥಿ (65) ಅರ್ಧಶತಕ ಸಿಡಿಸಿ ಮಿಂಚಿದರು.
ಭಾರತದ ಪರ ರವೀಂದ್ರ ಜಡೇಜಾ 3, ಕುಲದೀಪ್ ಯಾದವ್ 3, ಮೊಹಮ್ಮದ್ ಸಿರಾಜ್ 2, ಜಸ್ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್ ತಲಾ 1 ವಿಕೆಟ್ ಪಡೆದರು.
100 ಸಿಕ್ಸರ್ ಸಿಡಿಸಿದ ಮೊದಲ ತಂಡ ಭಾರತ:ಈ ಪಂದ್ಯದಲ್ಲಿ ಭಾರತ ಹೊಸ ದಾಖಲೆಯೊಂದನ್ನೂ ಬರೆಯಿತು. ಒಂದೇ ವರ್ಷದಲ್ಲಿ ಟೆಸ್ಟ್ ಸ್ವರೂಪದಲ್ಲಿ 100 ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ತಂಡ ಎಂಬ ಮೈಲಿಗಲ್ಲು ಸ್ಥಾಪಿಸಿತು. ಇದರೊಂದಿಗೆ ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿತು. 2022ರಲ್ಲಿ ಇಂಗ್ಲೆಂಡ್ 89 ಸಿಕ್ಸರ್ಗಳನ್ನು ಸಿಡಿಸಿ ಟೆಸ್ಟ್ ಸ್ವರೂಪದಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ್ದ ತಂಡವಾಗಿ ದಾಖಲೆ ಬರೆದಿತ್ತು.
ಯಶಸ್ವಿ ಜೈಸ್ವಾಲ್ ಈ ವರ್ಷ ಟೆಸ್ಟ್ ಸ್ವರೂಪದಲ್ಲಿ ಅತಿ ಹೆಚ್ಚು 29 ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟರ್ ಆಗಿದ್ದಾರೆ. ಶುಭಮನ್ ಗಿಲ್ ಮತ್ತು ರೋಹಿತ್ ಶರ್ಮಾ 16 ಮತ್ತು 11 ಸಿಕ್ಸರ್ಗಳೊಂದಿಗೆ ಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ.
ಟೆಸ್ಟ್‌ನಲ್ಲಿ ಒಂದು ವರ್ಷದಲ್ಲಿ ಟೆಸ್ಟ್ ಸಿಕ್ಸರ್ ಸಿಡಿಸಿದ ತಂಡಗಳು:
- 102* – ಭಾರತ (2024)
- 89 – ಇಂಗ್ಲೆಂಡ್ (2022)
- 87 – ಭಾರತ (2021)
- 81 – ನ್ಯೂಜಿಲೆಂಡ್ (2014)
- 71 – ನ್ಯೂಜಿಲೆಂಡ್ (2013)
ಇದನ್ನೂ ಓದಿ:ಟೆಸ್ಟ್ ಕ್ರಿಕೆಟ್ನಲ್ಲಿ 9,000 ರನ್ ಪೂರ್ಣಗೊಳಿಸಿದ ಕೊಹ್ಲಿ; ಈ ಸಾಧನೆ ಮಾಡಿದ 4ನೇ ಭಾರತೀಯ ಬ್ಯಾಟರ್