ಮೈಸೂರು: ಪ್ರಯಾಗ್ರಾಜ್ ಮಹಾಕುಂಭ ಮೇಳಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ನೆರವಾಗಲೆಂದು ಮೈಸೂರು-ವಾರಾಣಸಿ ಎಕ್ಸ್ಪ್ರೆಸ್ ರೈಲಿಗೆ (22867) ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗುತ್ತಿದೆ. ಈ ಬಗ್ಗೆ ಮೈಸೂರು-ಕೊಡಗು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರೈಲ್ವೆ ಇಲಾಖೆಗೆ ಮನವಿ ಮಾಡಿದ್ದರು.
ಮೈಸೂರು-ವಾರಾಣಸಿ ಎಕ್ಸ್ಪ್ರೆಸ್ ರೈಲು ಪ್ರಯಾಗರಾಜ್ ಮೂಲಕ ಹಾದು ಹೋಗುವ ಹಿನ್ನೆಲೆಯಲ್ಲಿ ಹೆಚ್ಚುವರಿ ಬೋಗಿಗಳನ್ನು ಅಳವಡಿಸಿದರೆ ಜನರಿಗೆ ಅನುಕೂಲವಾಗುತ್ತದೆ. 144 ವರ್ಷಗಳಿಗೊಮ್ಮೆ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಮೈಸೂರು-ಕೊಡಗು ಕ್ಷೇತ್ರದಿಂದ ತೆರಳುವ ಯಾತ್ರಿಗಳಿಗೆ ನೆರವಾಗಲೆಂದು ಹೆಚ್ಚುವರಿ ಬೋಗಿಗಳನ್ನು ಅಳವಡಿಸುವಂತೆ ರೈಲ್ವೆ ಇಲಾಖೆಗೆ ಸಂಸದ ಯದುವೀರ್ ಪತ್ರ ಬರೆದಿದ್ದರು.
ಇದಕ್ಕೆ ಸ್ಪಂದಿಸಿರುವ ರೈಲ್ವೆ ಇಲಾಖೆ, ರೈಲಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲು ಸಮ್ಮತಿಸಿದೆ.
ಹವಾನಿಯಂತ್ರಿತ ಕೋಚ್ ಅನ್ನೂ ಅಳವಡಿಸಲಾಗುವುದು. ಮುಂದಿನ ಫೆಬ್ರವರಿ 4ರಿಂದ ಮೈಸೂರು ವಾರಾಣಸಿ ಎಕ್ಸೆಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿಯ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಸಂಸದರಿಗೆ ಮಾಹಿತಿ ನೀಡಿದ್ದಾರೆ.
ಸಂಸದ ಯದುವೀರ್ ಪ್ರತಿಕ್ರಿಯೆ : ಈ ಕುರಿತು ಮಾಹಿತಿ ನೀಡಿರುವ ಸಂಸದ ಯದುವೀರ್, ಮಹಾಕುಂಭ ಮೇಳವು 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಸಂಗಮವಾಗಿದೆ. ಈ ಪುಣ್ಯ ಕಾಲದಲ್ಲಿ ತೀರ್ಥ ಸ್ನಾನ ಮಾಡಲು ಹಲವಾರು ಮಂದಿ ಇಚ್ಛಿಸಿರುತ್ತಾರೆ. ನಮ್ಮ ಕ್ಷೇತ್ರದ ಜನರಿಗೆ ಅನುಕೂಲವಾಗಲೆಂದು ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾ ಕುಂಭಮೇಳ ಕಾಲ್ತುಳಿತ: ಕ್ರಮಕ್ಕೆ ಆಗ್ರಹಿಸಿದ ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಈಗಾಗಲೇ ಮೈಸೂರು-ವಾರಾಣಸಿ ಎಕ್ಸ್ಪ್ರೆಸ್ ರೈಲು ಸಂಚರಿಸುತ್ತಿದೆ. ಇದಕ್ಕೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಿದರೆ ನಮ್ಮ ಕ್ಷೇತ್ರದಿಂದ ಯಾತ್ರಿಗಳಿಗೆ ಅನುಕೂಲವಾಗಲಿದೆ ಎಂಬ ಆಲೋಚನೆ ಬಂದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಗೆ ಪತ್ರ ಬರೆದು ಮನವಿ ಸಲ್ಲಿಸಿದ್ದೆ. ಅದಕ್ಕೆ ಇಲಾಖೆಯಿಂದ ಸ್ಪಂದನೆ ಬಂದು ಹೆಚ್ಚುವರಿ ಬೋಗಿಗಳ ಸಂಚಾರ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದು ನಮ್ಮ ಕ್ಷೇತ್ರದ ಜನರಿಗೆ ಮಹಾಕುಂಭ ಮೇಳದ ಕೊಡುಗೆಯಾಗಿದೆ. ಹೆಚ್ಚುವರಿ ಬೋಗಿಗಳ ಸಂಚಾರಕ್ಕೆ ಅವಕಾಶ ನೀಡಿರುವ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಸಂಸದರು ತಮ್ಮ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ: ರೈಲ್ವೇ ಪ್ರಯಾಣಿಕರೇ: ಕೊನೆಗೂ ಬಂತು ಎಲ್ಲ ಸೇವೆಗಳಿಗೆ ಒಂದೇ ಆ್ಯಪ್; SwaRail ಡೌನ್‌ಲೋಡ್ ಮಾಡಿ