ಹಾಸನ: ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ. ರೋಹಿತ್ (28), ಗಣೇಶ್ (29) ಮೃತಪಟ್ಟ ದುರ್ದೈವಿಗಳು. ತಾಲೂಕಿನ ಶ್ರವಣಬೆಳಗೊಳದ ಜಿನ್ನಾಪುರ ಗ್ರಾಮದಲ್ಲಿ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ಮೃತರಿಬ್ಬರೂ ಮೂಲತಃ ರಾಜಸ್ಥಾನದವರಾಗಿದ್ದು, ಶ್ರವಣಬೆಳಗೊಳದಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದರು. ಫೆ.2ರಂದು ಬಿಸಿಲಿನ ತಾಪದ ಹಿನ್ನೆಲೆ ಮಧ್ಯಾಹ್ನದವರೆಗೂ ಕೆಲಸ ಮಾಡಿ ಬಿಸಿಲು ಹೆಚ್ಚಾದಾಗ ಈಜಲು ಜಿನ್ನಾಪುರ ಕೆರೆಗೆ ಹೋಗಿದ್ದರು.
ಮೊದಲು ಕೆರೆಗೆ ಇಳಿದ ರೋಹಿತ್, ಈಜುವ ವೇಳೆ ಕೆರೆಯ ಗಿಡಗಂಟಿಗಳ ನಡುವೆ ಸಿಲುಕಿದ್ದಾರೆ. ಮೇಲೆ ಬರಲಾಗದೇ ಕಾಪಾಡಿ ಕಾಪಾಡಿ ಎಂದು ಕೂಗಾಡಿದ್ದಾರೆ. ತಕ್ಷಣ ಕೆರೆಗೆ ಜಿಗಿದ ಗಣೇಶ್ ಕೂಡ ಅಲ್ಲಿನ ಕೆಸರು ಹಾಗೂ ಬಳ್ಳಿಗಳ ನಡುವೆ ಸಿಲುಕಿದ್ದಾರೆ. ಮೇಲೆ ಬರಲಾಗದೇ ಇಬ್ಬರೂ ಒಟ್ಟಿಗೆ ಮೃತಪಟ್ಟಿದ್ದಾರೆ. ಸಂಜೆಯಾದರೂ ಮನೆಗೆ ಬಾರದಿದ್ದರಿಂದ ಮನೆಯವರು ಹುಡುಕುತ್ತಾ ಕೆರೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಕೂಡಲೇ ಸ್ಥಳೀಯರು ಸಮೀಪದ ಶ್ರವಣಬೆಳಗೊಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನಿಂದ ಮೃತದೇಹ ಹೊರತೆಗೆದು ಶವಾಗಾರಕ್ಕೆ ರವಾನಿಸಿದರು. ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹಾವೇರಿ: ನದಿಯಲ್ಲಿ ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು - YOUNG MAN DROWNED