ಚಾಮರಾಜನಗರ : ಕಿವಿ ಚುಚ್ಚಿಸಲು ಆಸ್ಪತ್ರೆಗೆ ಕರೆದೊಯ್ದಿದ್ದ ವೇಳೆ 6 ತಿಂಗಳ ಮಗು ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಹಂಗಳ ಗ್ರಾಮದ ಆನಂದ್ ಮತ್ತು ಶುಭಾ ದಂಪತಿಯ 6 ತಿಂಗಳ ಗಂಡು ಶಿಶು ಅಸುನೀಗಿದೆ. ಶುಭಾ ಬೊಮ್ಮಲಾಪುರ ಸಮೀಪದ ಶೆಟ್ಟಹಳ್ಳಿ ಗ್ರಾಮದರಾಗಿದ್ದು, ಬಾಣಂತನಕ್ಕೆ ತವರಿಗೆ ಬಂದಿದ್ದರು. ಮಗುವಿಗೆ 6 ತಿಂಗಳಾದ ಹಿನ್ನೆಲೆ ಕಿವಿ ಚುಚ್ಚಿಸಲು ಮುಂದಾಗಿದ್ದೆವು. ಈ ವೇಳೆ ಆಸ್ಪತ್ರೆಗೆ ಕರೆತಂದಿದ್ದ ವೇಳೆ ಮಗುವಿನ ಎರಡು ಕಿವಿಗಳಿಗೆ ಅನಸ್ತೇಶಿಯಾ ಕೊಟ್ಟಿದ್ದು, ಚುಚ್ಚುಮದ್ದು ನೀಡಿದ ಸ್ವಲ್ಪಹೊತ್ತಿಗೆ ಬಾಯಲ್ಲಿ ನೊರೆ ಬಂದು ಮಗು ಅಸುನೀಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಟಿಹೆಚ್ಒ ಪ್ರತಿಕ್ರಿಯೆ: ಈ ಕುರಿತು ಗುಂಡ್ಲುಪೇಟೆ ಟಿಹೆಚ್ಒ ಡಾ. ಅಲೀಂ ಪಾಷಾ ಪ್ರತಿಕ್ರಿಯೆ ನೀಡಿದ್ದು, ''ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ವೈದ್ಯರ ನಿರ್ಲಕ್ಷ್ಯ ದೃಢಪಟ್ಟರೆ ಸೂಕ್ತ ಕ್ರಮವನ್ನು ಉನ್ನತಾಧಿಕಾರಿಗಳು ಕೈಗೊಳ್ಳುತ್ತಾರೆ. ಮಗುವಿನ ಸಾವಿಗೆ ನ್ಯಾಯ ಸಿಗಬೇಕು'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಚಾಮರಾಜನಗರ: ಕಬ್ಬಿನ ಗದ್ದೆಯಲ್ಲಿ ಆಟವಾಡುವಾಗ ಹಾವು ಕಚ್ಚಿ 2 ವರ್ಷದ ಬಾಲಕ ಸಾವು - BOY DIES AFTER SNAKE BITE