ಗಯಾನಾ:ಇಂದು ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಟೂರ್ನಿ ಉದ್ಧಕ್ಕೂ ಅದ್ಭುತ ಪ್ರದರ್ಶನ ನೀಡಿರುವ ಟೀಂ ಇಂಡಿಯಾ, ಪಾಕಿಸ್ತಾನ, ಆಸ್ಟ್ರೇಲಿಯಾ, ಅಮೆರಿಕ, ಅಫ್ಘಾನಿಸ್ತಾನ, ಬಾಂಗ್ಲಾದೇಶದಂತಹ ತಂಡಗಳನ್ನು ಮಣಿಸಿ ಸೋಲಿಲ್ಲದೇ ಸೆಮಿಸ್ ಪ್ರವೇಶ ಮಾಡಿದೆ. ಇಂದು ಗಯಾನದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಅನ್ನು ಎದುರಿಸಲಿದೆ.
ಉಭಯ ತಂಡಗಳು ಈ ಹಿಂದೆ 2022ರ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ, ಇಂಗ್ಲೆಂಡ್ ವಿರುದ್ದ ಸೋಲನುಭವಿಸಿತ್ತು. ಇದೀಗ ಸೋಲಿನ ಸೇಡು ತೀರಿಸಿಕೊಳ್ಳಲು ರೋಹಿತ್ ಪಡೆ ಸಜ್ಜಾಗಿದೆ.
ಬಲಾಬಲ:ಭಾರತ ಮತ್ತು ಇಂಗ್ಲೆಂಡ್ ನಡುವೆ ಇಲ್ಲಿಯವರೆಗೆ ಒಟ್ಟು 23 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಇದರಲ್ಲಿ ಟೀಂ ಇಂಡಿಯಾ 12 ಪಂದ್ಯಗಳನ್ನು ಗೆದ್ದಿದ್ದರೆ, ಇಂಗ್ಲೆಂಡ್ ತಂಡ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಈ ಎರಡು ತಂಡಗಳ ನಡುವೆ ಒಟ್ಟು 4 ಪಂದ್ಯಗಳು ನಡೆದಿವೆ. ಇದರಲ್ಲಿ ಎರಡೂ ತಂಡಗಳು ತಲಾ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಸಮಬಲ ಸಾಧಿಸಿವೆ. ಒಟ್ಟಾರೆ ಅಂಕಿ - ಅಂಶಗಳ ಪ್ರಕಾರ, ಎರಡೂ ತಂಡಗಳು ಬಹುತೇಕ ಸಮಬಲ ಸಾಧಿಸಿವೆ.
ಪಿಚ್ ವರದಿ:ಗಯಾನಾದ ಈ ಪಿಚ್‌ನಲ್ಲಿ ವೇಗದ ಬೌಲರ್‌ಗಳು ಹೆಚ್ಚಿನ ಪ್ರಾಬಲ್ಯ ಸಾಧಿಸಲಿದ್ದಾರೆ. ಪಂದ್ಯ ಸಾಗುತ್ತಿದ್ದಂತೆ ಸ್ಪಿನ್ನರ್‌ಗಳು ಪಿಚ್ನ ನೆರವು ಪಡೆಯಲಿದ್ದಾರೆ. ಈ ಪಿಚ್‌ನಲ್ಲಿ, ಬ್ಯಾಟ್ಸ್‌ಮನ್‌ಗಳು ರನ್ಗಳಿಸಲು ಸಾಕಷ್ಟು ಪ್ರಯಾಸ ಪಡಬೇಕಾಗುತ್ತದೆ. ಆದರೆ, ಒಮ್ಮೆ ಬ್ಯಾಟ್ಸ್‌ಮನ್‌ಗಳು ಸೆಟ್ ಆದರೆ ದೊಡ್ಡ ಸ್ಕೋರ್ ಕಾಣಬಹುದಾಗಿದೆ. ಇಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 125 ರಿಂದ 130 ಆಗಿದೆ. ಈ ಪಿಚ್‌ನಲ್ಲಿ ದಾಖಲಾದ ಗರಿಷ್ಠ ಸ್ಕೋರ್ 191 ಮತ್ತು ಕನಿಷ್ಠ ಸ್ಕೋರ್ 39 ಆಗಿದೆ. ಈ ಪಿಚ್‌ನಲ್ಲಿ ಇದೂವರೆಗೂ ಒಟ್ಟು 18 ಪಂದ್ಯಗಳು ನಡೆದಿದ್ದು, ಮೊದಲ ಬ್ಯಾಟ್ ಮಾಡಿದ ತಂಡಗಳು 6 ಬಾರಿ ಗೆದ್ದಿದ್ದರೆ, ಬೌಲಿಂಗ್ ಮಾಡಿರುವ ತಂಡಗಳು 9 ಪಂದ್ಯಗಳನ್ನು ಗೆದ್ದಿವೆ. ಹಾಗಾಗಿ ಇಂದಿನ ಪಂದ್ಯದಲ್ಲಿ ಟಾಸ್ ನಿರ್ಣಾಯಕ ಪಾತ್ರವಹಿಸಲಿದೆ.
ಹವಾಮಾನ ವರದಿ:ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದ ಮೇಲೆ ಮಳೆಯ ಛಾಯೆ ಆವರಿಸಿದೆ. ಹವಾಮಾನ ಇಲಾಖೆಯ ವರದಿಗಳ ಪ್ರಕಾರ ಇಂದು ಶೇ.70ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರೊಂದಿಗೆ ಪಂದ್ಯದ ವೇಳೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಗಯಾನಾದಲ್ಲಿ ತಾಪಮಾನ ಸುಮಾರು 31 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬೆಳಗ್ಗೆ 10 ಗಂಟೆಗೆ 66%, 11 ಗಂಟೆಗೆ 75% ಮಳೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಮಧ್ಯಾಹ್ನ 12 ಗಂಟೆಗೆ ಶೇ.49, ಮಧ್ಯಾಹ್ನ 1 ಗಂಟೆಗೆ ಶೇ.34 ಹಾಗೂ ಮಧ್ಯಾಹ್ನ 2 ಗಂಟೆಗೆ ಶೇ.51ರಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಇದರಿಂದ ಪಂದ್ಯ ರದ್ದಾಗುವ ಸಾಧ್ಯತೆಯೂ ಇದೆ.