India vs Bangladesh, 2nd Test: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಮತ್ತು ಕೊನೇಯ ಪಂದ್ಯ ಇಂದಿನಿಂದ ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮಳೆಯಿಂದಾಗಿ ಮೈದಾನದ ಔಟ್‌ಫೀಲ್ಡ್ ಒದ್ದೆಯಾಗಿದ್ದರಿಂದ ಟಾಸ್ ವಿಳಂಬವಾಗಿತ್ತು. ಇದೀಗ ಟಾಸ್ ಗೆದ್ದಿರುವ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 280 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು. ಇದರೊಂದಿಗೆ ತಂಡ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ. ಇದೀಗ ಎರಡನೇ ಟೆಸ್ಟ್ ಪಂದ್ಯವನ್ನೂ ಗೆಲ್ಲುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿದೆ. ಇದರೊಂದಿಗೆ, 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೂ ಭಾರತ ಅಣಿಯಾಗುತ್ತಿದೆ.
ಹೇಗಿದೆ ಕಾನ್ಪುರ ಪಿಚ್?:ಕಾನ್ಪುರದ ಗ್ರೀನ್ ಪಾರ್ಕ್ ಭಾರತಕ್ಕೆ ಅದೃಷ್ಟದ ಪಿಚ್. ಏಕೆಂದರೆ, 1983ರಿಂದಲೂ ಇಲ್ಲಿ ತಂಡ ಯಾವುದೇ ಟೆಸ್ಟ್ ಪಂದ್ಯ ಸೋತಿಲ್ಲ. ಸತತ 41 ವರ್ಷಗಳಿಂದ ಗೆಲುವಿನ ಓಟ ಮುಂದುವರೆಸಿಕೊಂಡು ಬಂದಿದೆ. 1983ರಿಂದ ಈ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಒಟ್ಟು 9 ಟೆಸ್ಟ್ ಪಂದ್ಯಗಳನ್ನಾಡಿದ್ದು, 5ರಲ್ಲಿ ಜಯಿಸಿದೆ. ಇನ್ನುಳಿದ 4 ಪಂದ್ಯಗಳು ಡ್ರಾದಲ್ಲಿ ಮುಕ್ತಾಯ ಕಂಡಿವೆ. ಇಲ್ಲಿನ ಪಿಚ್ ಅನ್ನು ಕಪ್ಪು ಮಣ್ಣಿನಿಂದ ಸಿದ್ಧಪಡಿಸಲಾಗಿದ್ದು, ಸ್ಪಿನ್ ಬೌಲರ್ಗಳಿಗೆ ಹೆಚ್ಚು ನೆರವು ನೀಡುವ ಸಾಧ್ಯತೆ ಇದೆ. ಆದರೆ, ಮೊದಲೆರಡು ದಿನ ಪಿಚ್ ಸಮತಟ್ಟಾಗಿರುವುದರಿಂದ ಬ್ಯಾಟಿಂಗ್ ಮಾಡಲು ಸುಲಭವಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ.