ನವದೆಹಲಿ:ಟಿ-20 ವಿಶ್ವಕಪ್‌ಗೆ ಭಾರತ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ, ಯಜುವೇಂದ್ರ ಚಹಲ್, ಅಪಘಾತಕ್ಕೀಡಾಗಿ ವರ್ಷದ ಬಳಿಕ ಕ್ರಿಕೆಟ್ ಮೈದಾನಕ್ಕಿಳಿದ ರಿಷಬ್ ಪಂತ್ ಸ್ಥಾನ ಪಡೆದಿದ್ದರೆ, ಕನ್ನಡಿಗ ಕೆ.ಎಲ್.ರಾಹುಲ್ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ರೋಹಿತ್ ಶರ್ಮಾಗೆ ನಾಯಕತ್ವ ಪಟ್ಟ ನೀಡಿದ್ದರೆ, ಹಾರ್ದಿಕ್ ಪಾಂಡ್ಯ ಉಪ ನಾಯಕರಾಗಿದ್ದಾರೆ.
ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ನೇತೃತ್ವದಲ್ಲಿ ಮಂಗಳವಾರ ನಡೆದ ತಂಡದ ಆಯ್ಕೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಭಾಗಿಯಾಗಿದ್ದರು. ಸ್ಟ್ರೈಕ್ರೇಟ್ ಬಗ್ಗೆ ಅಪಸ್ವರ ಕೇಳಿಬಂದರೂ, ಹಿರಿಯ ಆಟಗಾರ ವಿರಾಟ್ ಕೊಹ್ಲಿಯನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಇಬ್ಬರು ವಿಕೆಟ್ ಕೀಪರ್‌ಗಳಾಗಿ ರಿಷಬ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಇರಲಿದ್ದಾರೆ.
ರೋಹಿತ್ ಕ್ಯಾಪ್ಟನ್ :ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಕಳೆದುಕೊಂಡ ನಿರಾಸೆಯಲ್ಲಿರುವ ರೋಹಿತ್ ಶರ್ಮಾಗೆ ಟಿ20 ತಂಡದ ನಾಯಕತ್ವ ನೀಡಲಾಗಿದೆ. ಹಲವು ಸರಣಿಗಳಿಗೆ ಕ್ಯಾಪ್ಟನ್ ಆಗಿದ್ದ ಹಾರ್ದಿಕ್ ಪಾಂಡ್ಯ ಉಪ ನಾಯಕರಾಗಿದ್ದಾರೆ. ಯುವ ಆಟಗಾರ, ಡ್ಯಾಶಿಂಗ್ ಓಪನರ್ ಯಶಸ್ವಿ ಜೈಸ್ವಾಲ್ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಟಿ20 ನಂಬರ್ 1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಸ್ಥಾನ ಅಬಾಧಿತವಾಗಿದೆ.
ಆಲ್ರೌಂಡರ್ಗಳ ಸಾಲಿನಲ್ಲಿ ಹಾರ್ದಿಕ್ ಪಾಂಡ್ಯ, ಮೊದಲ ಸಲ ವಿಶ್ವಕಪ್ ಆಡುತ್ತಿರುವ ಶಿವಂ ದುಬೆ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಇರಲಿದ್ದಾರೆ. 'ಕುಲ್ಚಾ' ಜೋಡಿ ಖ್ಯಾತಿಯ ಕುಲದೀಪ್ ಯಾದವ್, ಯಜುವೇಂದ್ರ ಚಹಲ್ ಮತ್ತೆ ಒಂದಾಗಿದ್ದಾರೆ. ಜಸ್ಪ್ರೀತ್ ಬುಮ್ರಾ ವೇಗದ ಪಡೆಯ ನೇತೃತ್ವ ವಹಿಸಿದರೆ, ಮೊಹಮದ್ ಸಿರಾಜ್, ಅರ್ಷದೀಪ್ ಸಿಂಗ್ ಸಾಥ್ ನೀಡಲಿದ್ದಾರೆ. ಭಾರತ ತಂಡದ ಸೆನ್ಸೇಷನ್ಗಳಾದ ಶುಭ್ಮನ್ ಗಿಲ್, ರಿಂಕು ಸಿಂಗ್ ಮೀಸಲು ತಂಡದಲ್ಲಿದ್ದಾರೆ.