ಪಾಟ್ನಾ (ಬಿಹಾರ) : ವಿಪಕ್ಷಗಳ I.N.D.I.A ಕೂಟವನ್ನು ಸೇರಲು ಆರ್ಜೆಡಿ ನಾಯಕ ಲಾಲು ಪ್ರಸಾದ್ ಅವರು ನೀಡಿದ್ದ ಆಫರ್ ಅನ್ನು ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಅಧಿಕಾರದಲ್ಲಿದ್ದಾಗ ವಿಪಕ್ಷಗಳು ಏನೂ ಮಾಡಲು ಸಾಧ್ಯವಾಗಿಲ್ಲ. ಅಂತಹ ಪಕ್ಷದೊಂದಿಗೆ ನಾನು ಎರಡು ಬಾರಿ ಕೈ ಜೋಡಿಸಿ ತಪ್ಪು ಮಾಡಿದೆ ಎಂದು ಹೇಳಿದ್ದಾರೆ.
ಈ ಮೊದಲು ವಿಪಕ್ಷಗಳ I.N.D.I.A ಕೂಟದಲ್ಲಿದ್ದು ಲೋಕಸಭೆ ಚುನಾವಣೆಗೂ ಮೊದಲು ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಕೂಟಕ್ಕೆ ಸೇರಿದ್ದ ಜೆಡಿಯು ಪಕ್ಷದ ಮುಖ್ಯಸ್ಥ, ಬಿಹಾರ ಸಿಎಂ ನಿತೀಶ್‌ಕುಮಾರ್ ಅವರನ್ನು ಮತ್ತೆ ತಮ್ಮ ಗುಂಪಿಗೆ ಸೇರಿಸಿಕೊಳ್ಳುವುದಾಗಿ ಆರ್ಜೆಡಿ ಹೇಳಿತ್ತು.
ಹಿಂದೆ ನಾನು ತಪ್ಪು ಮಾಡಿದ್ದೆ : ಮುಜಾಫರ್‌ಪುರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಬಿಹಾರ ಸಿಎಂ, ನಾನು ಈ ಹಿಂದೆ ಎರಡು ಬಾರಿ ವಿಪಕ್ಷಗಳೊಂದಿಗೆ ಸೇರಿಕೊಂಡು ತಪ್ಪು ಮಾಡಿದ್ದೆ. ಅವರು ನಮಗಿಂತಲೂ ಮೊದಲೇ ರಾಜ್ಯದ ಅಧಿಕಾರ ನಡೆಸಿದರೂ, ಏನೂ ಮಾಡಲಿಲ್ಲ. ಇಂದು ಮಹಿಳೆಯರು ಸ್ವಚ್ಛಂದವಾಗಿ, ಸ್ವತಂತ್ರವಾಗಿ ತಿರುಗಾಡುತ್ತಿದ್ದಾರೆ. ಹಿಂದೆ, ಸಂಜೆಯಾದರೆ ಕಾಲು ಹೊರಗಿಡಲೂ ಹೆದರುತ್ತಿದ್ದರು ಎಂದು ಹೇಳಿದರು.
'ಜೀವಿಕ' ಹೆಸರಿನಲ್ಲಿ ಮಹಿಳಾ ಸ್ವಸಹಾಯ ಗುಂಪುಗಳು ಕೆಲಸ ಮಾಡುತ್ತಿವೆ. ಕೇಂದ್ರ ಸರ್ಕಾರ ಅದನ್ನು 'ಆಜೀವಿಕ' ಎಂದು ನಾಮಕರಣ ಮಾಡಿ ಮತ್ತಷ್ಟು ಬಲ ತುಂಬಿದೆ. ಆತ್ಮವಿಶ್ವಾಸಪೂರ್ಣ ಗ್ರಾಮೀಣ ಮಹಿಳೆಯರನ್ನು ನೀವು ಹಿಂದೆ ಎಂದಾದರೂ ನೋಡಿದ್ದೀರಾ? ಎಂದು ಪ್ರಶ್ನಿಸಿದರು.
ಲಾಲು ಪ್ರಸಾದ್ ಹೇಳಿದ್ದೇನು? ಎರಡು ದಿನಗಳ ಹಿಂದಷ್ಟೇ ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರು ತಮ್ಮ ಹಳೆಯ ಮಿತ್ರ ನಿತೀಶ್‌ಕುಮಾರ್ ಅವರಿಗೆ ಇಂಡಿಯಾ ಕೂಟ ಸೇರಲು ಆಹ್ವಾನಿಸಿದ್ದರು. ವಿಪಕ್ಷಗಳ ಬಣದ ಬಾಗಿಲು ಜೆಡಿಯುಗೆ ಯಾವಾಗಲೂ ತೆರೆದಿರುತ್ತದೆ ಎಂದಿದ್ದರು. ಲಾಲು ಅವರ ಈ ಹೇಳಿಕೆಗೆ ಹೆಚ್ಚು ಮಹತ್ವವಿಲ್ಲ ಎಂದು ಪುತ್ರ ತೇಜಸ್ವಿ ಯಾದವ್ ಅವರು ಹೇಳಿದ್ದರು. ಇದನ್ನು ಕಾಂಗ್ರೆಸ್ ಕೂಡ ಅನುಮೋದಿಸಿತ್ತು.
ನಿತೀಶ್ ಸಿಎಂ ಅಭ್ಯರ್ಥಿ : ಇದೇ ವರ್ಷ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಜೆಡಿಯು- ಬಿಜೆಪಿ ಮೈತ್ರಿ ಸರ್ಕಾರದ ಸಿಎಂ ನಿತೀಶ್‌ಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ಹೇಳಿದ್ದರು. ರಾಜ್ಯದ ಬಿಜೆಪಿ ನಾಯಕರು ಕೂಡ ಇದನ್ನು ಬೆಂಬಲಿಸಿದ್ದಾರೆ.
ಇದನ್ನೂ ಓದಿ: ಲಾಲು ಮಾಡಲಿಲ್ಲ, ನಾನು ಪ್ರಿಯಾಂಕಾ ಗಾಂಧಿ ಕೆನ್ನೆಯಂಥಹ ರಸ್ತೆ ನಿರ್ಮಿಸುವೆ: ಬಿಜೆಪಿ ಅಭ್ಯರ್ಥಿ