ಹುಬ್ಬಳ್ಳಿ: ''ನಾನು ಮುಖ್ಯಮಂತ್ರಿ ಆಗಲಿ ಎಂದು ಗುಣಧರನಂದಿ ಮಹಾರಾಜರು ಆಶೀರ್ವಾದ ಮಾಡಿದ್ದಾರೆ. ನೀವು ಆಶೀರ್ವಾದ ಮಾಡಿದಾಗಲೆಲ್ಲಾ ನಮಗೆ ಏಟು ಹೊಡಿತಾ ಇರ್ತಾರೆ'' ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾರ್ಮಿಕವಾಗಿ ನುಡಿದರು.
ವರೂರು ನವಗ್ರಹ ತೀರ್ಥಕ್ಷೇತ್ರದ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ''ವಿನಯ್ ಗುರೂಜಿ ಅವರು ಈ ಮಾತನ್ನು ಹೇಳಿದ್ದರು. ಈಗ ಗುಣಧರನಂದಿ ಮಹಾರಾಜರು ಆಶೀರ್ವಾದ ಮಾಡಿದ್ದಾರೆ. ಆದರೆ, ನೀವು ಆಶೀರ್ವಾದ ಮಾಡಿದಾಗಲೆಲ್ಲಾ ನಮಗೆ ಏಟು ಹೊಡಿತಾ ಇರ್ತಾರೆ'' ಎಂದು ಮಾರ್ಮಿಕವಾಗಿ ಮಾತನಾಡಿದರು.
''ಅಹಿಂಸೆ, ಸತ್ಯ, ತ್ಯಾಗಕ್ಕೆ ಮತ್ತೊಂದು ಹೆಸರೇ ಜೈನ ಧರ್ಮ. ಈ ಡಿಕೆ ಶಿವಕುಮಾರ್ ನಿಮ್ಮ ಧರ್ಮದ ಜೊತೆಗೆ ಇರ್ತಾನೆ. ನನ್ನ ಮೇಲೆ ನಂಬಿಕೆ ಇಡಿ. ಜೈನ ಅಭಿವೃದ್ಧಿ ನಿಗಮ ಮಾಡಲು ಮನವಿ ಮಾಡಿದ್ದಾರೆ. ಸಿಎಂ ಜೊತೆ ಮಾತನಾಡಿ, ಮುಂಬರುವ ಬಜೆಟ್ನಲ್ಲಿಯೇ ರಚನೆ ಮಾಡಲು ಮನವಿ ಮಾಡ್ತೇನೆ. ಅಲ್ಪಸಂಖ್ಯಾತ ಸ್ಥಾನಮಾನ ಕೊಟ್ಟಿದ್ದು ನಮ್ಮ ಕಾಂಗ್ರೆಸ್. ಮನಮೋಹನ್ ಸಿಂಗ್ ಪ್ರಧಾನಿ ಇದ್ದಾಗ ಅಲ್ಪಸಂಖ್ಯಾತ ಸ್ಥಾನಮಾನ ಕೊಡಲಾಗಿದೆ. ನಮ್ಮ ಸರ್ಕಾರ, ನಮ್ಮ ಪಕ್ಷ ನಿಮ್ಮ ಜೊತೆಗೆ ಇರುತ್ತೆ'' ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ವೇದಿಕೆಯ ಮೇಲೆಯೇ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗುವಂತೆ ಆಶೀರ್ವಾದ ಮಾಡಿದ ರಾಷ್ಟ್ರಸಂತ ಗುಣಧರನಂದಿ ಮಹಾರಾಜರು, ''ಜೈನರಿಗೆ ನಿಗಮ ಮಂಡಳಿ ಆಗಬೇಕೆಂದು ಹಾಗೂ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂಬ ಎರಡು ಕನಸುಗಳಿವೆ'' ಎಂದಾಗ ವೇದಿಕೆಯ ಮೇಲಿದ್ದ ಎಲ್ಲ ಆಚಾರ್ಯರು ಮತ್ತು ಜೈನ ಮುನಿಗಳು ಕೈಮೇಲೆ ಮಾಡಿ ಅವರಿಗೆ ಆಶೀರ್ವಾದ ಮಾಡಿದರು.
''ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿಯೇ ತೀರುತ್ತಾರೆ. ಇವರು ಕಾಂಗ್ರೆಸ್ ಪಕ್ಷಕ್ಕೆ ಕಷ್ಟಪಟ್ಟಷ್ಟು ಯಾರೂ ಪಟ್ಟಿಲ್ಲ. ನಮ್ಮ ಆಸೆ ಇರೋದು ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅಂತ. ನಿಗಮ ಮಂಡಳಿ ಫೈಲ್ ಸತ್ತಿಲ್ಲ, ಜೀವಂತ ಇದೆ. ಜೈನರಿಗೆ ಕೊಟ್ಟು ಗೊತ್ತು, ಬೇಡಿ ಗೊತ್ತಿಲ್ಲ. ಆದ್ರೆ ಈಗ ನಿಗಮ ಮಂಡಲಿ ಬೇಡುತ್ತಿದ್ದೇವೆ. ನಮಗೆ ನಿಗಮ ಮಂಡಳಿ ನೀಡಿ'' ಎಂದು ಜೈನ ಮುನಿ ಗುಣಧರನಂದಿ ಮಹಾರಾಜ ಮನವಿ ಮಾಡಿದರು.
ಡಿಕೆ ಶಿವಕುಮಾರ್ಗಾಗಿ ಶತ್ರು ಸಂಹಾರ ಪೂಜೆ: ಡಿಕೆ ಶಿವಕುಮಾರ್ಗಾಗಿ ಸುಮೇರು ಪರ್ವತದಲ್ಲಿನ ಪಾರ್ಶ್ವನಾಥ ತೀರ್ಥಂಕರರ ಎದುರು ಪೂಜೆ ವೇಳೆ ಶತ್ರು ಸಂಹಾರ ಮಂತ್ರ ಪಠಿಸಲಾಯಿತು. ಎರಡು ಬಾರಿ ಶತ್ರು ಸಂಹಾರ ಮಂತ್ರವನ್ನು ಜೈನ ಮುನಿ ಗುಣಧರನಂದಿ ಸ್ವಾಮೀಜಿ ಪಠಿಸಿದರು. ಮಹಾಮಸ್ತಕಾಭಿಷೇಕದ ವೇದಿಕೆ ಕಾರ್ಯಕ್ರಮ ನಂತರ ಸುಮೇರು ಪರ್ವತ ವೀಕ್ಷಣೆಗೆ ತೆರಳಿದ್ದ ಡಿಕೆ ಶಿವಕುಮಾರ್, ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಡಿ.ಸುಧಾಕರ, ಶಾಸಕ ಎನ್ ಹೆಚ್ ಕೋನರೆಡ್ಡಿ ಎದುರೆ ಶತ್ರು ಸಂಹಾರ ಪೂಜೆ ನಡೆಸಿದ್ದು ವಿಶೇಷವಾಗಿತ್ತು.
ನೀವು ಸಿಎಂ ಆಗಲೆಂದು ಮುನಿಗಳು ಆಶೀರ್ವಾದ ಮಾಡಿದ್ದಾರೆಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರು ಡಿಸಿಎಂ ಅವರನ್ನು ಕೇಳಿದಾಗ, ''ಧರ್ಮಗುರುಗಳು ಆಶೀರ್ವಾದ ಮಾಡುವಾಗ ನಾವು ಏನು ಹೇಳಲು ಸಾಧ್ಯ? ಅದು ಅವರ ಇಚ್ಛೆ. ಏನೇ ಇದ್ದರೂ ನಮ್ಮ ಪಕ್ಷವಷ್ಟೇ. ಪಕ್ಷ ಮುಖ್ಯ, ಪಕ್ಷ ಏನು ತೀರ್ಮಾನ ಮಾಡುತ್ತದೋ, ಅದನ್ನು ನಾವು ಮಾಡುತ್ತೇವೆ. ನಾನು ಯಾವುದೇ ಸ್ಥಾನವನ್ನು ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ. ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಏನು ಕೆಲಸ ಮಾಡಬೇಕೋ ಅದನ್ನು ನಾನು ಮಾಡುತ್ತೇನೆ. ನಾನು ಆತುರದಲ್ಲಿಲ್ಲ'' ಎಂದು ತಿಳಿಸಿದರು.
ಎಸ್.ಟಿ ಸೋಮಶೇಖರ್ ಅವರು ನಿಮ್ಮ ಸಮಾವೇಶದಲ್ಲಿ ಭಾಗವಹಿಸಿದ್ದರು ಎಂದು ಕೇಳಿದಾಗ, ''ಅವರು ಸುವರ್ಣಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು'' ಎಂದರು.
ಇದನ್ನೂ ಓದಿ: ಹಿಂದೆ ಧರ್ಮಸಿಂಗ್, ಸಿದ್ದರಾಮಯ್ಯ ಕಾಲದಲ್ಲೂ ತ್ಯಾಗ ಮಾಡಿದ್ದೇನೆ: ಡಿಸಿಎಂ ಡಿಕೆಶಿ ತ್ಯಾಗದ ಮಾತು - DCM DK SHIVAKUMAR