ನವದೆಹಲಿ:ಮಹತ್ವದ ಬೆಳವಣಿಗೆಯೊಂದರಲ್ಲಿ, 2036ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯ ವಹಿಸಲು ಆಸಕ್ತಿಯನ್ನು ವ್ಯಕ್ತಪಡಿಸಿ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಅಕ್ಟೋಬರ್ 1ರಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯ ಭವಿಷ್ಯದ ಆತಿಥ್ಯ ಆಯೋಗಕ್ಕೆ ಔಪಚಾರಿಕವಾಗಿ ಪತ್ರ ಬರೆದಿದೆ ಎಂದು ಮೂಲಗಳು ಐಎಎನ್ಎಸ್ಗೆ ತಿಳಿಸಿವೆ.
"2036 ರಲ್ಲಿ ಭಾರತದಲ್ಲಿ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳನ್ನು ಆಯೋಜಿಸುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವು ಮಹತ್ವದ ಹೆಜ್ಜೆಯಾಗಿದೆ" ಎಂದು ಮೂಲಗಳು ಹೇಳಿವೆ.
"ಈ ಸ್ಮರಣೀಯ ಅವಕಾಶವು ದೇಶಕ್ಕೆ ಗಣನೀಯ ಪ್ರಯೋಜನಗಳನ್ನು ಒದಗಿಸಬಹುದು. ದೇಶಾದ್ಯಂತ ಆರ್ಥಿಕ ಬೆಳವಣಿಗೆ, ಸಾಮಾಜಿಕ ಪ್ರಗತಿ ಮತ್ತು ಯುವ ಸಬಲೀಕರಣವನ್ನು ಈ ಕ್ರೀಡಾಕೂಟವು ಉತ್ತೇಜಿಸಬಹುದು" ಎಂದು ಮೂಲಗಳು ತಿಳಿಸಿವೆ.
2036ರ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯ ವಹಿಸುವ ಭಾರತದ ಆಸಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅನೇಕ ಸಂದರ್ಭಗಳಲ್ಲಿ ವ್ಯಕ್ತಪಡಿಸಿದ್ದಾರೆ. ನವದೆಹಲಿಯ ತಮ್ಮ ನಿವಾಸದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, 2036 ರಲ್ಲಿ ಒಲಿಂಪಕ್ಸ್ ಕ್ರೀಡಾಕೂಟವನ್ನು ಆಯೋಜಿಸುವ ಸಿದ್ಧತೆಗಳಿಗೆ ಸಲಹೆಗಳನ್ನು ನೀಡುವಂತೆ ಅವರಿಗೆ ಕೇಳಿಕೊಂಡಿದ್ದರು.
2036ರ ಒಲಿಂಪಿಕ್ಸ್ ಆತಿಥ್ಯ ವಹಿಸಲು ಭಾರತ ಸಿದ್ಧತೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ, ಹಿಂದಿನ ಒಲಿಂಪಿಕ್ಸ್ ನಲ್ಲಿ ಆಡಿದ ಕ್ರೀಡಾಪಟುಗಳ ಅಭಿಪ್ರಾಯಗಳು ಬಹಳ ಮುಖ್ಯ. ನೀವೆಲ್ಲರೂ ಅನೇಕ ವಿಷಯಗಳನ್ನು ಗಮನಿಸಿರುತ್ತೀರಿ ಮತ್ತು ಸಾಕಷ್ಟು ವಿಷಯಗಳು ನಿಮ್ಮ ಅನುಭವಕ್ಕೆ ಬಂದಿರುತ್ತವೆ. ನೀವು ಈ ಎಲ್ಲ ಮಾಹಿತಿಗಳನ್ನು ದಾಖಲಿಸಿ, ಸರ್ಕಾರಕ್ಕೆ ನೀಡಿ ಎಂದು ಕೇಳಿಕೊಳ್ಳುತ್ತಿದ್ದೇವೆ. ಇದರಿಂದ ಯಾವುದೇ ಕುಂದು ಕೊರತೆಗಳಾಗದಂತೆ 2036 ರ ಒಲಿಂಪಿಕ್ಸ್ಗೆ ನಾವು ಸಿದ್ಧತೆ ಮಾಡಿಕೊಳ್ಳಬಹುದು" ಎಂದು ಪಿಎಂ ಮೋದಿ ಕ್ರೀಡಾಪಟುಗಳಿಗೆ ಹೇಳಿದ್ದರು.