ಗ್ರೋಸ್ ಐಲೆಟ್ (ಸೇಂಟ್ ಲೂಸಿಯಾ): ಇಲ್ಲಿನ ಡ್ಯಾರೆನ್ ಸಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಟಿ20 ವಿಶ್ವಕಪ್ 2024ರ ಸೂಪರ್-8 ಪಂದ್ಯದಲ್ಲಿ ಭಾರತ ತಂಡವು ಬಲಿಷ್ಟ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿತು. ಈ ಪಂದ್ಯವು ಹಲವು ದಾಖಲೆಗಳಿಗೂ ಸಾಕ್ಷಿಯಾಯಿತು. ಇದರೊಂದಿಗೆ ರೋಹಿತ್ ಪಡೆಯು ಆಸ್ಟ್ರೇಲಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕಾಂಗರೂ ಪಡೆಯನ್ನು ಸೋಲಿಸಿ ಸೆಮೀಸ್ ಟಿಕೆಟ್ ಗಿಟ್ಟಿಸಿಕೊಂಡಿದೆ. ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.
ನಿರ್ಣಾಯಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ರೋಹಿತ್ ಶರ್ಮಾ ಅವರ ಅಮೋಘ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಈ ಬೃಹತ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಟ್ರಾವಿಸ್ ಹೆಡ್ ಅಬ್ಬರದ ಅರ್ಧಶತಕದ ಹೊರತಾಗಿಯೂ 7 ವಿಕೆಟ್ ಕಳೆದುಕೊಂಡು 181 ರನ್ ಗಳಿಸಲಷ್ಟೇ ಶಕ್ತವಾಯ್ತು.
ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಪಡೆ ವಿರಾಟ್ ಕೊಹ್ಲಿ (0) ಅವರ ಮೊದಲ ವಿಕೆಟ್ ಪತನದ ಬಳಿಕ ಸಂಕಷ್ಟಕ್ಕೆ ಸಿಲುಕಿತು. ಆದರೂ ನಾಯಕ ರೋಹಿತ್ ತಮ್ಮ ಅಬ್ಬರ ಮುಂದುವರಿಸಿ, ಮಿಚೆಲ್ ಸ್ಟಾರ್ಕ್ ಅವರ ಮೂರನೇ ಓವರ್‌ನಲ್ಲಿ ಭರ್ಜರಿ 29 ರನ್ಗಳನ್ನು ಕಲೆ ಹಾಕಿದರು. ಈ ಮೂಲಕ 19 ಎಸೆತಗಳಲ್ಲಿಯೇ ಅರ್ಧಶತಕ ಪೂರೈಸಿದರು. ಇದು ಪ್ರಸಕ್ತ ಆವೃತ್ತಿಯ ಪಂದ್ಯಾವಳಿಯ ವೇಗದ ಅರ್ಧಶತಕವಾಯಿತು. 8.4 ಓವರ್‌ಗಳಲ್ಲಿ ಭರ್ಜರಿ 100 ರನ್ ಕಲೆ ಹಾಕುವ ಮೂಲಕ ರೋಹಿತ್ ಪಡೆ ಕಾಂಗರೂ ಬೌಲರ್ಗಳ ಬೆವರಿಳಿಸಿದರು. 41 ಎಸೆತಗಳಲ್ಲಿ 8 ಸಿಕ್ಸ್, 7 ಬೌಂಡರಿ ಸಹಿತ 92 ರನ್ ಗಳಿಸಿದ ನಾಯಕ ರೋಹಿತ್ ಶರ್ಮಾ ಶತಕದಂಚಿನಲ್ಲಿ ಔಟಾದರು. ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಸ್ಟಂಪ್ ಹಾರಿಸುವ ಮೂಲಕ ರೋಹಿತ್ ಅವರ ಅಬ್ಬರದ ಆಟದ ಜೊತೆಗೆ ಶತಕಕ್ಕೂ ಮುಳುವಾದರು. ಅವರಿಗೆ ಸಾಥ್ ನೀಡಿದ್ದ ರಿಷಭ್ ಪಂತ್ 15 ರನ್ ಗಳಿಸಿ ಔಟಾದರು. ಬಳಿಕ ಕ್ರೀಸ್ಗೆ ಇಳಿದ ಸೂರ್ಯಕುಮಾರ್ ಯಾದವ್ 31 ರನ್ ಗಳಿಸಿದರೆ, ಡೆತ್ ಓವರ್‌ನಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ ಅಜೇಯ 27 ರನ್ ಗಳಿಸಿದರು. 19ನೇ ಓವರ್‌ನಲ್ಲಿ ಶಿವಂ ದುಬೆ 28 ರನ್ ಗಳಿಸಿ ಮಾರ್ಕಸ್ ಸ್ಟೊಯ್ನಿಸ್‌ಗೆ ಶರಣಾದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ (9) ಭಾರತದ ಮೊತ್ತವನ್ನು 200ರ ಗಡಿ ದಾಟಿಸಿದರು.