ಮಂಗಳೂರು: ಸ್ನಾನ ಮಾಡುತ್ತಿದ್ದ ಅಪ್ರಾಪ್ತೆಯ ವಿಡಿಯೋ ಚಿತ್ರೀಕರಣ ಮಾಡಿದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೊಕ್ಸೊ) ಎಫ್‌ಟಿಎಸ್‌ಸಿ-1 ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಗಗನ್ (24) ಶಿಕ್ಷೆಗೊಳಗಾದವ.
ಪ್ರಕರಣ ನಡೆದು ಕೇವಲ 9 ತಿಂಗಳಿನಲ್ಲೇ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೊ) ಎಫ್‌ಟಿಎಸ್‌ಸಿ-1 ನ್ಯಾಯಾಧೀಶ ವಿನಯ್ ದೇವರಾಜ್ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಐಪಿಸಿ ಸೆಕ್ಷನ್ 354 (ಸಿ) ಅಡಿಯಲ್ಲಿ ಆರೋಪಿಗೆ 1 ವರ್ಷ ಸಾದಾ ಸಜೆ, 20 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 3 ತಿಂಗಳ ಸಾದಾ ಶಿಕ್ಷೆ ಅನುಭವಿಸಲು ಸೂಚಿಸಿದೆ. ದಂಡದ ಮೊತ್ತದಲ್ಲಿ 10 ಸಾವಿರ ರೂ. ಮತ್ತು ಪ್ರತ್ಯೇಕವಾಗಿ 1 ಲಕ್ಷ ರೂ. ಹಣವನ್ನು ನೊಂದ ಬಾಲಕಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಧೀಶರು ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ.
ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದಿಸಿದ್ದರು.
ಪ್ರಕರಣದ ಹಿನ್ನೆಲೆ: ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ 2024ರ ಮಾ.10ರಂದು ರಾತ್ರಿ 8:45ರ ಸುಮಾರಿಗೆ ಅಪ್ರಾಪ್ತ ಬಾಲಕಿ ತನ್ನ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಆರೋಪಿ ಗಗನ್ (24) ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ. ಈ ವೇಳೆ ಮೊಬೈಲ್ ಲೈಟ್ ಕಂಡು ಬಾಲಕಿ ಕೂಗಿದಾಗ ಅವರ ತಾಯಿ ಬಂದಿದ್ದರು. ಈ ವೇಳೆ ಆರೋಪಿ ಓಡಿಹೋಗಿ ತಪ್ಪಿಸಿಕೊಂಡಿದ್ದನು ಎಂದು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸ್ಐಗಳಾದ ಗುರಪ್ಪ ಕಾಂತಿ ಮತ್ತು ರೇವಣ್ಣ ಸಿದ್ದಪ್ಪ ಜಿ ತನಿಖೆ ನಡೆಸಿದ್ದರು. ಬಳಿಕ ಪ್ರಕರಣ ಸಂಬಂಧ ಎಸ್ಐ ಸತೀಶ್ ಕೆ.ಎಸ್ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಇದನ್ನೂ ಓದಿ: 5 ವರ್ಷದ ಬಾಲಕಿ ಅತ್ಯಾಚಾರ ಪ್ರಕರಣ: 62 ವರ್ಷದ ವ್ಯಕ್ತಿಯ ಮರಣದಂಡನೆ ಜೀವಾವಧಿಯಾಗಿ ಪರಿವರ್ತಿಸಿದ ಹೈಕೋರ್ಟ್
ಜೈಲಿನೊಳಗೆ ಸಿಗರೇಟ್, ಮೊಬೈಲ್ ಎಸೆಯಲು ಯತ್ನ: ಮಂಗಳೂರಿನ ಜೈಲಿನೊಳಗಡೆ ಮೊಬೈಲ್ ಹಾಗೂ ಸಿಗರೇಟ್ ಎಸೆಯಲು ಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಂಜಿಮೊಗರು ನಿವಾಸಿ ಪ್ರಜ್ವಲ್(21) ಬಂಧಿತ.
ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರೋಪಿ ಪ್ರಜ್ವಲ್ ಜೈಲು ಸಮೀಪದ ಕೆನರಾ ಕಾಲೇಜಿನ ಮುಖ್ಯದ್ವಾರದ ಒಳಗೆ ಪ್ರವೇಶಿಸಿದ್ದ. ಅಲ್ಲಿಂದ ಕಾರಾಗೃಹದೊಳಗೆ ಕೆಂಪು ಬಣ್ಣದ ಗಮ್‌ಟೇಪ್‌ನಿಂದ ಸುತ್ತಿದ ಪೊಟ್ಟಣಗಳನ್ನು ಎಸೆಯಲು ಯತ್ನಿಸುತ್ತಿದ್ದ. ಇದನ್ನು ಗಮನಿಸಿದ ಗಸ್ತು ಕರ್ತವ್ಯದಲ್ಲಿದ್ದ ಕೆಎಸ್‌ಐಎಸ್‌ಎ ಸಿಬ್ಬಂದಿ, ಆರೋಪಿಯನ್ನು ವಶಪಡಿಸಿಕೊಂಡಿದೆ.
ಈ ಪೊಟ್ಟಣದೊಳಗೆ ಎರಡು ಕೀ ಪ್ಯಾಡ್ ಮೊಬೈಲ್ ಮತ್ತು ಎರಡು ಪ್ಯಾಕೆಟ್ ಸಿಗರೇಟ್ ಇತ್ತು. ಪ್ರಜ್ವಲ್ ಈ ಹಿಂದೆ ಪ್ರಕರಣವೊಂದರಲ್ಲಿ ಬಂಧಿಸಲ್ಪಟ್ಟು ಕಾರಾಗೃಹದಲ್ಲಿದ್ದ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣ: 7 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ