ಥಾಣೆ (ಮಹಾರಾಷ್ಟ್ರ): ಕ್ರಿಕೆಟ್ ಮೈದಾನದಲ್ಲಿ ಸಾಮಾನ್ಯವಾಗಿ ಬ್ಯಾಟರ್ಗಳು ಸಿಕ್ಸರ್, ಬೌಂಡರಿಗಳ ಮೂಲಕ ರನ್ ಮಳೆ ಹರಿಸುವುದನ್ನು ನೋಡಿರುತ್ತೇವೆ. ಆದ್ರೆ ಥಾಣೆಯಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಪ್ರೇಕ್ಷಕನೊಬ್ಬ ಆಟಗಾರನ ಮೇಲೆ ಹಣದ ಸುರಿಮಳೆ ಸುರಿಸಿರುವುದು ಬೆಳಕಿಗೆ ಬಂದಿದೆ. ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು, ಮಹಾರಾಷ್ಟ್ರದ ಭಿವಂಡಿ ತಾಲೂಕಿನ ಛತ್ರಪತಿ ಶಿವಾಜಿ ಮಹಾರಾಜ ಮೈದಾನದಲ್ಲಿ 7 ಓವರ್ಗಳ ಕ್ರಿಕೆಟ್ ಪಂದ್ಯವನ್ನು ಆಯೋಜಿಸಲಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಕೇವಲ 6 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 84 ರನ್ಗಳನ್ನು ಕಲೆಹಾಕಿತು. ಈ ಸಂದರ್ಭದಲ್ಲಿ ಪವನ್ ಎಂಬ ಆಟಗಾರ ಬೌಂಡರಿ ಸಿಕ್ಸರ್ಗಳ ಮಳೆಯನ್ನು ಹರಿಸುತ್ತಿದ್ದರು. ಬಿರುಸಿನ ಬ್ಯಾಟಿಂಗ್ ಮಾಡಿದ ಪವನ್ ಕೇವಲ 9 ಎಸೆತಗಳಲ್ಲಿ 35 ರನ್ ಚಚ್ಚಿದ್ದರು.
ಮೊದಲ ಎಸೆತದಿಂದಲೇ ಪವನ್ ಹೊಡಿಬಡಿ ಆಟವನ್ನು ಆಡಿ ನೆರೆದಿದ್ದವರ ಗಮನ ಸೆಳೆದಿದ್ದರು. ಈ ವೇಳೆ ಪವನ್ ಬ್ಯಾಟಿಂಗ್ನಿಂದ ಆಕರ್ಷಿತಗೊಂಡ ಪ್ರೇಕ್ಷಕನೊಬ್ಬ ಮೈದಾನ ಪ್ರವೇಶಿಸಿ ಪವನ್ ಮೇಲೆ ಕಂತೆ ಕಂತೆ ನೋಟುಗಳನ್ನು ಎಸೆದಿದ್ದಾನೆ. ಆದ್ರೆ ಪ್ರೇಕ್ಷಕ ಎಸೆದಿದ್ದು ಹತ್ತು ಇಪ್ಪತ್ತು ರೂಪಾಯಿ ನೋಟುಗಳಲ್ಲ ಬದಲಾಗಿ ₹500 ರೂಪಾಯಿ ಮುಖಬೆಲೆಯ ನೋಟುಗಳನ್ನು ಎಸೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಹೀಗೆ ನೋಟ್ಗಳನ್ನು ಎಸೆಯುತ್ತಿದ್ದಂತೆ ಅಲ್ಲಿ ನೆರೆದಿದ್ದ ಪ್ರೇಕ್ಷಕರು ಮೈದಾನಕ್ಕೆ ನುಗ್ಗಿ ದುಡ್ಡನ್ನು ಆರಿಸಿಕೊಂಡಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಜೆಪಿ ಕಲ್ಯಾಣ ನಗರದ ಅಧ್ಯಕ್ಷ ವರುಣ್ ಪಾಟೀಲ್ ಅವರು ಈ ಪಂದ್ಯಾವಳಿಯನ್ನು ಆಯೋಜಿಸಿದ್ದರು. ಈ ಪಂದ್ಯಾವಳಿಯನ್ನು ಕಲ್ಯಾಣ್ ಲೋಕಸಭಾ ಸಂಸದ ಡಾ. ಶ್ರೀಕಾಂತ್ ಶಿಂಧೆ ಉದ್ಘಾಟಿಸಿದ್ದರು. ವೈರಲ್ ಆಗುತ್ತಿರುವ ವಿಡಿಯೋಗೆ ಹಲವಾರು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ನೋಟುಗಳಿಗೆ ಅಪಮಾನ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಏಕದಿನ, ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್