ಚಂದನವನದ ಜನಪ್ರಿಯ ತಾರೆಗಳಾದ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿ ಹರಿಪ್ರಿಯಾರ ಸೀಮಂತ ಶಾಸ್ತ್ರ ಇತ್ತೀಚೆಗೆ ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಅದ್ಧೂರಿಯಾಗಿ ನೆರವೇರಿತು. ಕನ್ನಡ ಚಿತ್ರರಂಗದ ಖ್ಯಾತ ತಾರೆಯರು ಸಮಾರಂಭದಲ್ಲಿ ಪಾಲ್ಗೊಂಡು ಶೀಘ್ರದಲ್ಲೇ ಪೋಷಕರಾಗಲಿರುವ ದಂಪತಿಯನ್ನು ಹರಸಿದರು.
ಸೀಮಂತ ಸಮಾರಂಭಕ್ಕೆ ಹರಿಪ್ರಿಯಾ ತಮ್ಮ ಎರಡೂ ಕೈಗಳಿಗೆ ಮೆಹಂದಿ ಹಾಕಿಸಿಕೊಂಡಿದ್ದರು. ಹಸಿರು, ತಿಳಿ ಕೆಂಪು ಬಣ್ಣದ ಸೀರೆಯಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದರು. ನಟಿಯ ಮೊಗದಲ್ಲಿ ಗರ್ಭಿಣಿಯ ಕಳೆ ತುಂಬಿತ್ತು. ಕಾರ್ಯಕ್ರಮದ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಸದ್ಯದಲ್ಲೇ ಅಪ್ಪ, ಅಮ್ಮನಾಗಲಿರುವ ತಾರಾ ದಂಪತಿಗೆ ಅಭಿಮಾನಿಗಳು ಕೂಡಾ ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.
2024ರ ನವೆಂಬರ್ 1ರಂದು ತಾವು ಪೋಷಕರಾಗುತ್ತಿರುವ ಸಿಹಿಸುದ್ದಿಯನ್ನು ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಅದಕ್ಕೂ ಒಂದೆರಡು ದಿನಗಳ ಮುನ್ನ ಹಂಚಿಕೊಂಡಿದ್ದ ಫೋಟೋ, ವಿಡಿಯೋಗಳಲ್ಲಿ ಹರಿಪ್ರಿಯಾ ಗರ್ಭಿಣಿ ಇರಬಹುದೆಂದು ಫ್ಯಾನ್ಸ್ ಊಹಿಸಿದ್ದರು. ನಂತರ ಶೇರ್ ಮಾಡಿದ ಪೋಸ್ಟ್ನಲ್ಲಿ ನಿಮ್ಮ ಊಹೆ ಸರಿ ಎಂಬುದನ್ನು ಕನ್ನಡ ಚಿತ್ರರಂಗದ ಬಹುಬೇಡಿಕೆ ತಾರೆ ಖಚಿತಪಡಿಸಿದ್ದರು.
ಇದನ್ನೂ ಓದಿ: ಸಂಧ್ಯಾ ಥಿಯೇಟರ್ ಕಾಲ್ತುಳಿತ: ಆಸ್ಪತ್ರೆಗೆ ತೆರಳಿ ಗಾಯಾಳು ಬಾಲಕನ ಆರೋಗ್ಯ ವಿಚಾರಿಸಿದ ಅಲ್ಲು ಅರ್ಜುನ್
ನವೆಂಬರ್ 1ರ ಪೋಸ್ಟ್ನಲ್ಲಿ, ''ಪ್ರೀತಿಯ ಕನ್ನಡ ಮನಸ್ಸುಗಳಿಗೆ ಕರ್ನಾಟಕ ರಾಜ್ಯೋತ್ಸವದ ಹಾಗೂ ದೀಪಾವಳಿಯ ಶುಭಾಶಯಗಳು. ಈ ಶುಭ ದಿನದಂದು, ನಿಮ್ಮೆಲ್ಲರೊಡನೆ ಶುಭಸುದ್ದಿಯೊಂದನ್ನು ಹಂಚಿಕೊಳ್ಳುವಾಸೆ ನಮ್ಮದು. ನಿಮ್ಮಲ್ಲಿ ಬಹುತೇಕರು ಊಹಿಸಿದ್ದು ಸರಿಯೇ. ಹೌದು, ನಾವು ನಮ್ಮ ಕುಡಿಗಾಗಿ ಎದುರುನೋಡುತ್ತಿದ್ದೇವೆ..! ನಿಮ್ಮೆಲ್ಲರ ಹಾರೈಕೆ ಮತ್ತು ಆಶೀರ್ವಾದಗಳ ನಿರೀಕ್ಷೆಯಲ್ಲಿ - ನಿಮ್ಮ ಸಿಂಹಪ್ರಿಯ'' ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: ಜನ್ಮದಿನಕ್ಕೂ ಮುನ್ನ ಕುತೂಹಲಕಾರಿ ಪೋಸ್ಟರ್ ಅನಾವರಣಗೊಳಿಸಿದ ಯಶ್: ಎರಡು ದಿನದಲ್ಲಿ ಸಿಗಲಿದೆ 'ಟಾಕ್ಸಿಕ್' ಅಪ್ಡೇಟ್
ಬಹುಸಮಯದಿಂದ ಪ್ರೀತಿಯಲ್ಲಿದ್ದ ಜೋಡಿ ಎಲ್ಲೂ ತಮ್ಮ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಇವರು ಪ್ರೀತಿಯಲ್ಲಿರಬಹುದೆಂಬ ವದಂತಿಯೂ ಹರಡಲಿಲ್ಲ. ಮದುವೆಗೆ ಇನ್ನೇನು ಕೆಲ ದಿನಗಳಿದೆ ಎನ್ನುವಾಗ ಅಧಿಕೃತವಾಗಿ ತಮ್ಮ ವಿಚಾರಗಳನ್ನು ಮಾಧ್ಯಮಗಳೆದುರು ಹಂಚಿಕೊಂಡಿದ್ದರು. ಇವರ ಪ್ರೇಮ್ ಕಹಾನಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. 2023ರ ಜನವರಿ 26 ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಪ್ರೇಮಪಕ್ಷಿಗಳು ಹಸೆಮಣೆ ಏರಿದ್ದರು. ಅದ್ಧೂರಿ ಸಮಾರಂಭಕ್ಕೆ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರ ಕುಟುಂಬಸ್ಥರು ಮತ್ತು ಸ್ನೇಹಿತರು ಸಾಕ್ಷಿಯಾಗಿದ್ದರು. ದಾಂಪತ್ಯ ಜೀವನಕ್ಕೆ ಶುಭ ಹಾರೈಕೆಗಳು ಹರಿದುಬಂದಿದ್ದವು. ಇದೀಗ ಪೋಷಕರಾಗುತ್ತಿರುವ ಖುಷಿಯಲ್ಲಿದ್ದಾರೆ. ಶೀಘ್ರದಲ್ಲೇ ತಂದೆ ತಾಯಿ ಆಗಲಿರುವ ಸೆಲೆಬ್ರಿಟಿ ಕಪಲ್ಗೆ ಹೆಚ್ಚಿನ ಸಂಖ್ಯೆಯ ಫ್ಯಾನ್ಸ್ ಅಭಿನಂದನೆ ಜೊತೆ ಶುಭ ಹಾರೈಸುತ್ತಿದ್ದಾರೆ. ಜೊತೆಗೆ ಸೀಮಂತ ಶಾಸ್ತ್ರದ ಹೆಚ್ಚಿನ ಫೋಟೋ, ವಿಡಿಯೋಗಳಿಗಾಗಿ ನೆಟ್ಟಿಗರು ಕಾತರರಾಗಿದ್ದಾರೆ.