ನವದೆಹಲಿ:ಭಾರತ ಪ್ರವಾಸದ ವೇಳೆ ಇಂಗ್ಲೆಂಡ್‌ಗೆ ಮತ್ತೊಂದು ವೀಸಾ ಸಂಬಂಧಿತ ಸಮಸ್ಯೆ ಎದುರಾಗಿದೆ. ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ಅವರು ಅಬುಧಾಬಿಯಿಂದ ಹಿಂದಿರುಗುವಾಗ ಸಾಕಷ್ಟು ದಾಖಲೆಗಳ ಕೊರತೆಯಿಂದಾಗಿ ರಾಜ್‌ಕೋಟ್‌ನ ಹಿರಾಸರ್ ವಿಮಾನ ನಿಲ್ದಾಣದಿಂದ ನಿರ್ಗಮಿಸುವುದಕ್ಕೆ ಅಧಿಕಾರಿಗಳು ತಡೆ ಹಿಡಿದರು. ಎರಡನೇ ಮತ್ತು ಮೂರನೇ ಟೆಸ್ಟ್ ಪಂದ್ಯದ ನಡುವೆ ಸುದೀರ್ಘ ವಿರಾಮದ ಕಾರಣ, ಇಂಗ್ಲೆಂಡ್ ತಂಡವು ತಮ್ಮ ಕುಟುಂಬಗಳೊಂದಿಗೆ ಸಮಯ ಕಳೆಯಲು ಅಬುಧಾಬಿಗೆ ತೆರಳಿರುವುದು ಗಮನಾರ್ಹ.
ಕಳೆದ 30 ದಿನಗಳಲ್ಲಿ ಎರಡನೇ ಬಾರಿಗೆ ಯುಎಇಯಿಂದ ಹಿಂತಿರುಗುತ್ತಿರುವಾಗ ಮಲ್ಟಿ - ಎಂಟ್ರಿ ವೀಸಾದ ಕೊರತೆಯಿಂದಾಗಿ ಅಹ್ಮದ್ ಅವರನ್ನು ಹಿರೇಸ್ಸರ್ ವಿಮಾನ ನಿಲ್ದಾಣದಿಂದ ಹೊರಬರುವುದನ್ನು ತಡೆಹಿಡಿಯಲಾಗಿತ್ತು ಎಂದು ಸ್ಪೋರ್ಟ್ ಮಾಧ್ಯಮವೊಂದು ಸೋಮವಾರ ವರದಿ ಮಾಡಿದೆ. ಭಾರತಕ್ಕೆ ಕೇವಲ ಏಕ - ಪ್ರವೇಶದ ವೀಸಾ( ಸಿಂಗಲ್ ಎಂಟ್ರಿ) ಹೊಂದಿರುವ ಸ್ಪಿನ್ನರ್ ಅನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ತಡೆದರು. ಅಗತ್ಯ ದಾಖಲೆಗಳ ಪರಿಶೀಲನೆ ಪೂರ್ಣಗೊಳ್ಳುವವರೆಗೂ ವಿಮಾನ ನಿಲ್ದಾಣದಲ್ಲಿ ಕಾಯಲು ಇಂಗ್ಲೆಂಡ್ ತಂಡದ ಆಟಗಾರನಿಗೆ ಸೂಚಿಸಲಾಯಿತು.
ಕಳೆದ ತಿಂಗಳು ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್ ಸ್ಪಿನ್ ಬೌಲರ್ ಶೋಯೆಬ್ ಬಶೀರ್ ಅವರನ್ನೂ ವೀಸಾ ಸಮಸ್ಯೆಯಿಂದ ತಡೆಹಿಡಿಯಲಾಗಿತ್ತು. ಆ ನಂತರ ಈ ಸ್ಪಿನ್ ಬೌಲರ್ ಅಬುಧಾಬಿಯಿಂದ ಇಂಗ್ಲೆಂಡ್‌ಗೆ ಮರಳಬೇಕಾಯಿತು. ಆದರೂ ಈ ಸಮಸ್ಯೆಯು ಒಂದು ಅಥವಾ ಎರಡು ದಿನಗಳ ನಂತರ ಪರಿಹರಿಸಲ್ಪಟ್ಟಿತ್ತು ಮತ್ತು ಬಶೀರ್ ವಿಶಾಖಪಟ್ಟಣಂ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ ಆಡುವ 11ರ ಬಳಗದಲ್ಲಿ ಸ್ಥಾನವನ್ನು ಕೂಡಾ ಪಡೆದುಕೊಂಡಿದ್ದರು.