ದಾವಣಗೆರೆ : ನಗರದ ಹಳೇ ಕುಂದುವಾಡದ ನಿವಾಸಿಯಾಗಿರುವ ಶಿವಪ್ಪ, ಗಂಗಮ್ಮ ದಂಪತಿಯ ಪುತ್ರ ಜಗದೀಶ್ ಇಡೀ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ ನಡೆದ ರಾಷ್ಟ್ರೀಯ ಮಾರ್ಷಲ್ ಆರ್ಟ್ಸ್ ಮೋಯ್ ಥೈ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ರಾಜ್ಯವನ್ನ ಪ್ರತಿನಿಧಿಸಿ ಗೆದ್ದು, ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಈ ಮೂಲಕ ಇಂಡೋನೇಷ್ಯಾದಲ್ಲಿ ಫೆ. 25 ಕ್ಕೆ ಜರುಗುವ ಅಂತಾರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ. ಅಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.
ದಾವಣಗೆರೆಯ ಜಗದೀಶ್ ಕಿಕ್ ಬಾಕ್ಸಿಂಗ್ ಪಟು. ಇವರು ಕಿಕ್ ಬಾಕ್ಸಿಂಗ್ ಕ್ರೀಡೆಯನ್ನು ಉಸಿರಾಗಿಸಿಕೊಂಡಿದ್ದಾರೆ. ಬಡತನದಲ್ಲೇ ಅರಳಿದ ಪ್ರತಿಭೆ ಜಗದೀಶ್ ಸಾಕಷ್ಟು ಪರಿಶ್ರಮ ಪಟ್ಟು ಸಾಧನೆ ಮಾಡಿದ್ದಾರೆ.
ರಾಷ್ಟ್ರೀಯ ಮಾರ್ಷಲ್ ಆರ್ಟ್ಸ್ನ ಮೋಯ್ ಥೈ ಕಿಕ್ ಬಾಕ್ಸಿಂಗ್ ಫೈನಲ್ ಸ್ಪರ್ಧೆಯಲ್ಲಿ 58 ಕೆಜಿ ವಿಭಾಗದಲ್ಲಿ ಕಿಕ್ ಬಾಕ್ಸರ್ ಜಗದೀಶ್ ಮೇಘಾಲಯ ರಾಜ್ಯದ ಕಿಕ್ ಬಾಕ್ಸರ್ ಪಟುವನ್ನು ಮಣಿಸಿ ಗೆದ್ದು ಬೀಗಿದ್ದಾರೆ. ಈ ಮೂಲಕ ಇಂಡೋನೇಷ್ಯಾದಲ್ಲಿ ಜರಗುವ ಅಂತಾರಾಷ್ಟ್ರೀಯ ಮಟ್ಟದ ಮೋಯ್ ಥೈ ಕಿಕ್ ಬಾಕ್ಸಿಂಗ್ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ.
ಬಡತನದಲ್ಲಿ ಅರಳಿದ ಪ್ರತಿಭೆ : ಹುಟ್ಟು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಜಗದೀಶ್ ಅವರ ಪೋಷಕರು ಕೂಲಿ ಕೆಲಸ ಮಾಡ್ತಾ ಬದುಕಿನ ಬಂಡಿ ದೂಡುತ್ತಿದ್ದಾರೆ. ಬಡತನ ಇದ್ದರೂ ಛಲ ಬಿಡದೇ ಜಗದೀಶ್ ಪಣತೊಟ್ಟು ಕಿಕ್ ಬಾಕ್ಸಿಂಗ್ನಲ್ಲಿ ಸಾಧನೆ ಮಾಡಿದ್ದಾರೆ. ಇವರಿಗೆ ಈಗಲ್ ಫಿಟ್ನೆಸ್ನ ವೆಂಕಿ ಸೆನ್ಸೈ ಎಂಬುವವರು ತರಬೇತಿ ನೀಡಿದ್ದಾರೆ. ಇದೀಗ ವಿಶೇಷ ಸಾಧನೆ ಮಾಡಿದ ಜಗದೀಶ್ಗೆ ಅವರು ಶುಭ ಹಾರೈಸಿದ್ದಾರೆ.
ಇದನ್ನೂ ಓದಿ : ಮಾಜಿ ಯೋಧನಿಂದ ಕರಾಟೆ ತರಬೇತಿ; ಕನ್ನಡ ಕಲಿತ ಹೊರರಾಜ್ಯದ ಮಕ್ಕಳು - KARATE TRAINING