ಭೋಪಾಲ್ (ಮಧ್ಯಪ್ರದೇಶ): ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ 'ಭೋಪಾಲ್ ನವಾಬ್' (ನವಾಬ) ಎಂಬ ಹೆಸರೀಗ ಸಂಕಷ್ಟದಲ್ಲಿದೆ. ಕಾನೂನು ವಿವಾದ ಹಿನ್ನೆಲೆ ಅವರು ಭೋಪಾಲ್‌ನಲ್ಲಿರುವ 15,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಕುಟುಂಬದ ಆಸ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಆಸ್ತಿ ವಶಪಡಿಸಿಕೊಳ್ಳುವ ಸಾಧ್ಯತೆ? ಭೋಪಾಲ್‌ನ ಹಿಂದಿನ ಆಡಳಿತಗಾರರ ಆಸ್ತಿಯ ಹೆಚ್ಚಿನ ಭಾಗವನ್ನು ಈಗಾಗಲೇ ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ಕೆಲ ಭಾಗವನ್ನು ಭೋಪಾಲ್ ನವಾಬ್ ಕುಟುಂಬ ಸದಸ್ಯರು ಮಾರಾಟ ಮಾಡಿದ್ದಾರೆ. ಶತ್ರು ಆಸ್ತಿಗೆ ಸಂಬಂಧಿಸಿದ ವಿವಾದಗಳ ತೀರ್ಪಿಗಾಗಿ ಮೇಲ್ಮನವಿ ಪ್ರಾಧಿಕಾರವನ್ನು ರಚಿಸುವ ಬಗ್ಗೆ ಸುದ್ದಿಗಳು ಕೇಳಿಬರುತ್ತಿವೆ. ಈ ಹಿಂದೆ, ಕೇಂದ್ರ ಸರ್ಕಾರ ಪಟೌಡಿ ಕುಟುಂಬದ ಹಲವು ಐತಿಹಾಸಿಕ ಆಸ್ತಿಗಳನ್ನು 'ಶತ್ರು ಆಸ್ತಿ' ಎಂದು ಘೋಷಿಸಿತ್ತು ಮತ್ತು ಮಧ್ಯಪ್ರದೇಶ ಹೈಕೋರ್ಟ್ 2015ರಲ್ಲಿ ಈ ಆಸ್ತಿಗಳ ಮೇಲೆ ವಿಧಿಸಲಾದ ತಡೆಯಾಜ್ಞೆ ತೆಗೆದುಹಾಕಿತ್ತು. ಇದೀಗ ಹೈಕೋರ್ಟ್ ಸೈಫ್ ಅವರಿಗೆ ಮೇಲ್ಮನವಿ ಪ್ರಾಧಿಕಾರ ಸಂಪರ್ಕಿಸುವಂತೆ ಸೂಚಿಸಿದೆ. ಇಲ್ಲದಿದ್ದರೆ ಸರ್ಕಾರವು ಅವರ ಕುಟುಂಬದ ಭೋಪಾಲ್ ಆಸ್ತಿಯನ್ನು ಶತ್ರು ಆಸ್ತಿ ಕಾಯ್ದೆ 1968ರ ಅಡಿ ವಶಪಡಿಸಿಕೊಳ್ಳುವ ಸಾಧ್ಯತೆಗಳಿವೆ.
ಸೈಫ್ ನವಾಬ್ ಬಿರುದು ರದ್ದು? ಈ ಪ್ರಕರಣದ ಬಗ್ಗೆ ತಿಳಿದುಕೊಳ್ಳಲು ಈಟಿವಿ ಭಾರತ್ ಭೋಪಾಲ್‌ನ ವಕೀಲರಾದ ಜಗದೀಶ್ ಛಾವಾನಿ ಮತ್ತು ಹಿಮಾಂಶು ರೈ ಅವರನ್ನು ಸಂಪರ್ಕಿಸಿತು. ಇವರು ಆಸ್ತಿ ವಿವಾದಗಳ ಮಾಹಿತಿ ಹೊಂದಿದ್ದಾರೆ. ವಕೀಲ ಹಿಮಾಂಶು ರೈ, "ಈ ಸಂಬಂಧ ಅಧಿಸೂಚನೆ ಹೊರಡಿಸುವವರೆಗೆ ಸೈಫ್ ಅಲಿ ಖಾನ್ ಅವರ ನವಾಬ್ ಬಿರುದನ್ನು ರದ್ದುಗೊಳಿಸಲಾಗುವುದಿಲ್ಲ" ಎಂದು ತಿಳಿಸಿದರು.
"ಈವರೆಗೂ, ಸೈಫ್ ಅಲಿ ಖಾನ್ ಭೋಪಾಲ್ ನವಾಬ್ ಎಂಬ ಬಿರುದನ್ನು ಉಳಿಸಿಕೊಂಡಿದ್ದಾರೆ. ತಮ್ಮ ಬಿರುದು ಮತ್ತು ಆಸ್ತಿಯನ್ನು ಉಳಿಸಿಕೊಳ್ಳಲು ಅಥವಾ ಸಮರ್ಥಿಸಿಕೊಳ್ಳಲು ನ್ಯಾಯಯದ ಮೆಟ್ಟಿಲೇರಬಹುದು. ಸೈಫ್ ಕಾನೂನುಬದ್ಧವಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬಹುದು ಮತ್ತು ನ್ಯಾಯಾಲಯದ ಮುಂದೆ ತಮ್ಮ ಪರವಾಗಿ ವಾದ ಮಂಡಿಸಬಹುದು" ಎಂದು ಹಿಮಾಂಶು ರೈ ತಿಳಿಸಿದರು.
ಆಸ್ತಿಗೆ ಸಂಬಂಧಿಸಿದ ಮಾಹಿತಿ: 1949ರಲ್ಲಿ, ಭೋಪಾಲ್ ರಾಜ್ಯವು ಭಾರತದ ಭಾಗವಾದಾಗ, ಭೋಪಾಲ್ ರಾಜ್ಯದ ಕೊನೆಯ ಬೇಗಂ ಸುಲ್ತಾನ್ ಜಹಾನ್ ಅವರ ಮಗ ಹಮೀದುಲ್ಹ್ಲಾ ಖಾನ್ ನವಾಬರಾದರು. ಭೋಪಾಲ್ ಗಡ್ಡಿ ಕಾಯ್ದೆ ಮತ್ತು ವಿಲೀನ ಒಪ್ಪಂದದ ಏಳನೇ ವಿಧಿಯ ಪ್ರಕಾರ, ನವಾಬ್ ಹಮೀದುಲ್ಹ್ಲಾ ಖಾನ್ ಮತ್ತು ಅವರ ನಂತರ ಅವರ ಹಿರಿಯ ಮಗು ಈ ಸ್ಥಾನಕ್ಕೆ ಅರ್ಹರಾಗಿರುತ್ತಾರೆ. ಆದರೆ, ನವಾಬ್ ಹಮೀದುಲ್ಹ್ಲಾ ಖಾನ್ ಅವರಿಗೆ ಮೂವರು ಹೆಣ್ಣುಮಕ್ಕಳಿದ್ದರು. ಮಗ ಇರಲಿಲ್ಲ. ಹಿರಿಯ ಮಗಳ ಹೆಸರು ಅಬಿದಾ, ನಂತರ ಸಾಜಿದಾ ಸುಲ್ತಾನ್ ಮತ್ತು ರಬಿಯಾ ಸುಲ್ತಾನ್.
ವಿಭಜನೆಯ ನಂತರ 1950ರಲ್ಲಿ ಅಬಿದಾ ಸುಲ್ತಾನ್ ಪಾಕಿಸ್ತಾನಕ್ಕೆ ತೆರಳಿದರು, ನವಾಬ್ ಉತ್ತರಾಧಿಕಾರವನ್ನು ಅವರ ತಂಗಿ ಸಾಜಿದಾ ಸುಲ್ತಾನ್ ಅವರಿಗೆ ಬಿಟ್ಟುಕೊಟ್ಟರು. ಅವರನ್ನು 1961ರಲ್ಲಿ ಅಧಿಕೃತವಾಗಿ ನವಾಬ್ ಉತ್ತರಾಧಿಕಾರಿ ಎಂದು ಗುರುತಿಸಲಾಯಿತು. ಜನವರಿ 10, 1961ರಂದು, ಸಾಜಿದಾ ಸುಲ್ತಾನ್ ಅವರಿಗೆ ನವಾಬ್ ಎಂಬ ಬಿರುದನ್ನು ನೀಡಲಾಯಿತು.
ಸಾಜಿದಾ ಸುಲ್ತಾನ್ ಮರಣದ ನಂತರ, ಅವರ ಮಗ ಮನ್ಸೂರ್ ಅಲಿ ಖಾನ್ ಪಟೌಡಿ ಉತ್ತರಾಧಿಕಾರಿಯಾದರು. ಅವರ ನಂತರ, ನಟ ಸೈಫ್ ಅಲಿ ಖಾನ್ 'ಭೋಪಾಲ್ ನವಾಬ್' ಎಂಬ ಬಿರುದನ್ನು ಪಡೆದರು. ಸುಮಾರು 15,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳ ಮಾಲೀಕರಾದರು. ಸೈಫ್ ಅಲಿ ಖಾನ್ ಅವರು ಶರ್ಮಿಳಾ ಠಾಗೋರ್ ಮತ್ತು ಮನ್ಸೂರ್ ಅಲಿ ಖಾನ್ ಪಟೌಡಿ ಪುತ್ರ.
1968ರಲ್ಲಿ ಭಾರತದಲ್ಲಿ ಜಾರಿಗೆ ಬಂದ 'ಶತ್ರು ಆಸ್ತಿ ಕಾಯ್ದೆ'ಯೇ ಸೈಫ್ ಅವರಿಗೆ ದೊಡ್ಡ ಅಡಚಣೆಯಾಗಿದೆ. ಶತ್ರು ಆಸ್ತಿ ಕಾಯ್ದೆಯ ಪ್ರಕಾರ, ಶತ್ರು ರಾಷ್ಟ್ರಗಳಲ್ಲಿ ನೆಲೆಸುವ ಭಾರತೀಯ ಪ್ರಜೆಗಳ ಸ್ಥಿರ ಆಸ್ತಿಯನ್ನು ಶತ್ರು ಆಸ್ತಿ ಎಂದು ಪರಿಗಣಿಸಲಾಗುತ್ತದೆ ಮತ್ತು 'ಸರ್ಕಾರಿ ಸ್ವಾಮ್ಯದ ಆಸ್ತಿ' ಎಂದು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಅಂತಿಮವಾಗಿ ಭಾರತ ಸರ್ಕಾರವು ಅಂತಹ ವಿವಾದಿತ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುತ್ತದೆ. ಫೆಬ್ರವರಿ 25, 2015ರಂದು ಶತ್ರು ಆಸ್ತಿ ಕಚೇರಿ ನೀಡಿದ ಪ್ರಮಾಣಪತ್ರದಲ್ಲಿ ಭೋಪಾಲ್ ನವಾಬ್ ಅಬಿದಾ ಸುಲ್ತಾನ್ ಅವರ ಆಸ್ತಿಗೆ ಸಂಬಂಧಿಸಿದಂತೆ ಅವರನ್ನು ಉತ್ತರಾಧಿಕಾರಿ ಎಂದು ಉಲ್ಲೇಖಿಸಲಾಗಿದೆ. ಅಬಿದಾ ಸುಲ್ತಾನ್ ಪಾಕಿಸ್ತಾನಕ್ಕೆ ತೆರಳಿ ಮದುವೆಯ ನಂತರ ಪಾಕಿಸ್ತಾನಿ ಪ್ರಜೆಯಾದಾಗಿನಿಂದ, ಸರ್ಕಾರವು ನವಾಬ್ ಆಸ್ತಿಗಳಲ್ಲಿ ಅವರ ಪಾಲನ್ನು ಶತ್ರು ಆಸ್ತಿ ಎಂದು ಪರಿಗಣಿಸಲಾಗಿದೆ.
ಶಹರ್ಯಾರ್ ಪುತ್ರ ಶತ್ರು ಆಸ್ತಿ ಕಾಯ್ದೆಯಡಿ ಭೋಪಾಲ್ ನವಾಬ್!; "ಭಾರತ ಸರ್ಕಾರವು ಅಬಿದಾ ಸುಲ್ತಾನ್ ಅವರನ್ನು ಶತ್ರು ಆಸ್ತಿ ಕಾಯ್ದೆಯಡಿ ಭೋಪಾಲ್ ನವಾಬ್ ಉತ್ತರಾಧಿಕಾರಿ ಎಂದು ಪರಿಗಣಿಸಿದರೆ, ದಿವಂಗತ ಶಹರ್ಯಾರ್ ಖಾನ್ (ಅಬಿದಾ ಅವರ ಮಗ) ಮತ್ತು ಪ್ರಸ್ತುತ ಅವರ ಮಗನನ್ನು ಭೋಪಾಲ್ ನವಾಬ್ ಎಂದು ಕರೆಯಲಾಗುತ್ತದೆ. ಇದು ಸಂಭವಿಸಿದಲ್ಲಿ, ಸೈಫ್ ಭೋಪಾಲ್ ನವಾಬ್ ಎಂಬ ಬಿರುದನ್ನು ಕಳೆದುಕೊಳ್ಳುವುದಲ್ಲದೇ, ಭೋಪಾಲ್‌ನಲ್ಲಿರುವ 15,000 ಕೋಟಿ ಮೌಲ್ಯದ ಆಸ್ತಿಯೂ ಸಹ ಈ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ" ಎಂದು ವಕೀಲ ಜಗದೀಶ್ ಛಾವಾನಿ ತಿಳಿಸಿದ್ದಾರೆ.
2017ರ ಶತ್ರು ಆಸ್ತಿ ತಿದ್ದುಪಡಿ ಕಾಯ್ದೆಯು, ಕಾನೂನುಬದ್ಧ ಉತ್ತರಾಧಿಕಾರಿಗಳು ತಮ್ಮ ಪೌರತ್ವವನ್ನು ಲೆಕ್ಕಿಸದೇ ಮಾಲೀಕತ್ವವನ್ನು ಪಡೆಯಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿ, ಅಂತಹ ವಿವಾದಿತ ಆಸ್ತಿಗಳನ್ನು ಉಳಿಸಿಕೊಳ್ಳುವ ಸರ್ಕಾರದ ಹಕ್ಕನ್ನು ಬಲಪಡಿಸಿತು. ಹಾಗಾಗಿ, ಹೈಕೋರ್ಟ್ ಸೈಫ್ ಅವರಿಗೆ ಮೇಲ್ಮನವಿ ಪ್ರಾಧಿಕಾರವನ್ನು ಸಂಪರ್ಕಿಸಲು ಸೂಚಿಸಿದೆ.
"ಭೋಪಾಲ್‌ನ ಅರ್ಧದಷ್ಟು ಭಾಗವನ್ನು ಒಳಗೊಂಡಿರುವ ಹಳೇ ನಗರ ಪ್ರದೇಶಗಳ ಬಹುಪಾಲು ಭಾಗವು ನವಾಬಿ ಭೂಮಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆದ್ದರಿಂದ ಈ ಸಂಪೂರ್ಣ ಆಸ್ತಿಯನ್ನು 1968ರ ಶತ್ರು ಆಸ್ತಿ ಕಾಯ್ದೆ ಎಂದು ವರ್ಗೀಕರಿಸಿದರೆ, ಸುಮಾರು ಐದು ಲಕ್ಷ ಜನರ ಮೇಲೆ ಪರಿಣಾಮ ಬೀರುತ್ತದೆ" ಎಂದು ವಕೀಲ ಹಿಮಾಂಶು ರೈ ತಿಳಿಸಿದ್ದಾರೆ.
ಇದನ್ನೂ ಓದಿ: 'ಸ್ಟ್ರೆಚರ್ ತನ್ನಿ, ನಾನು ಸೈಫ್ ಅಲಿ ಖಾನ್': ರಕ್ತಸಿಕ್ತಗೊಂಡಿದ್ದ ನಟನನ್ನು ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಹೇಳಿದ್ದಿಷ್ಟು
"ನವಾಬ್ ಕುಟುಂಬವೇ ಅನೇಕ ಆಸ್ತಿಗಳನ್ನು ಮಾರಾಟ ಮಾಡಿದೆ. ಹಲವು ಆಸ್ತಿಗಳಿಗೆ ಪರಿಹಾರವನ್ನು ಸಹ ಪಡೆದಿದ್ದಾರೆ. ಅಡೆತಡೆಗಳು ಸಾಕಷ್ಟಿವೆ" ಎಂದು ರೈ ತಿಳಿಸಿದರು.
ಇದನ್ನೂ ಓದಿ: 100 ಹೊಲಿಗೆಗಳಿಂದ ಹಿಡಿದು ಕೆಲ ಶಸ್ತ್ರಚಿಕಿತ್ಸೆಗಳವರೆಗೆ: 5 ಬಾರಿ ಗಾಯಗೊಂಡ ಸೈಫ್ ಅಲಿ ಖಾನ್
ಭಾರತ - ಪಾಕಿಸ್ತಾನ ಯುದ್ಧದ ನಂತರ (1965) ಪಾಕಿಸ್ತಾನಕ್ಕೆ ಹೋದವರು ಭಾರತದಲ್ಲಿ ಬಿಟ್ಟುಹೋದ ಆಸ್ತಿಗಳನ್ನು ನಿಯಂತ್ರಿಸಲು ಶತ್ರು ಆಸ್ತಿ ಕಾಯ್ದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು.