ಹೈದರಾಬಾದ್: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೀರ್‌ಪೇಟೆಯಲ್ಲಿ ಇತ್ತೀಚೆಗೆ ನಡೆದ ಗೃಹಿಣಿ ವೆಂಕಟಮಾಧವಿಯ ಭೀಕರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಹಲವು ಆಘಾತಕಾರಿ ಸಂಗತಿಗಳು ಸಿಕ್ಕಿವೆ. ಆರೋಪಿ ಪತಿ ಗುರುಮೂರ್ತಿ ತನ್ನ ವಿವಾಹೇತರ ಸಂಬಂಧದ ಸಲುವಾಗಿಯೇ ಪತ್ನಿ ವೆಂಕಟಮಾಧವಿಯನ್ನು ಭೀಕರವಾಗಿ ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪತಿಯ ವಿವಾಹೇತರ ಸಂಬಂಧವೇ ಈ ಕೊಲೆಗೆ ಕಾರಣ ಎಂಬ ಮಾಹಿತಿ ಲಭ್ಯವಾಗಿದ್ದು, ಪ್ಲಾನ್ ಮಾಡಿ ಕೊಲೆ ಮಾಡಿದ್ದ ಗುರುಮೂರ್ತಿ, ವೆಬ್ ಸರಣಿಯ ಶೈಲಿಯಲ್ಲಿ ಶವವನ್ನು ವಿಲೇವಾರಿ ಮಾಡಿ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ಅನ್ನೋದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
''ಅಂದುಕೊಂಡಂತೆ ಜನವರಿ 15 ರಂದು ವೆಂಕಟೇಶ್ವರನಗರ ಕಾಲೋನಿಯಲ್ಲಿ ಪತ್ನಿ ವೆಂಕಟಮಾಧವಿಯನ್ನು ಕೊಲೆ ಮಾಡಿದ ಪತಿ ಗುರುಮೂರ್ತಿ, ಯಾವ ಸಾಕ್ಷಿಗಳು ಸಿಗಬಾರದು ಎಂಬ ಕಾರಣದಿಂದ ಪತ್ನಿಯ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕುಕ್ಕರ್ ಹಾಕಿ ಕುದಿಸಿ, ಬಳಿಕ ಬೇಯಿಸಿದ ದೇಹದ ಭಾಗಗಳನ್ನು ಪಕ್ಕದ ಕೆರೆಯಲ್ಲಿ ಬಿಸಾಕಿ ಬಂದಿದ್ದ. ಕಬ್ಬಿಣದ ರಾಡ್ ಸಹಾಯದಿಂದ ಮೃತದೇಹದ ಮೂಳೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿದ್ದು, ಕೃತ್ಯಕ್ಕೆ ಬಳಸಲಾದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಹತ್ಯೆ ಬಳಿಕ ಆರೋಪಿ ತನ್ನ ಮೇಲೆ ಅನುಮಾನ ಬರಬಾರದೆಂದು ತನ್ನ ಪೋಷಕರೊಂದಿಗೆ ತೆರಳಿ ಮೀರ್‌ಪೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಸದ್ಯ ಆತನ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ಸಾಕ್ಷ್ಯ ಸಂಗ್ರಹಿಸಲು ಕೆರೆಯಲ್ಲಿ ದೇಹದ ಭಾಗಗಳಿಗಾಗಿ ಹುಡುಕಾಟ ನಡೆದಿದೆ'' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುರುಮೂರ್ತಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ನಿವೃತ್ತರಾದ ನಂತರ ಡಿಆರ್‌ಡಿಒದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸುಮಾರು 13 ವರ್ಷಗಳ ಹಿಂದೆ ಇವರ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಅಪರಾಧ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹ: ತನಿಖಾ ಭಾಗವಾಗಿ ಪೊಲೀಸರು ಶುಕ್ರವಾರ, ಆರೋಪಿ ಗುರುಮೂರ್ತಿಯನ್ನು ಅವರ ನಿವಾಸಕ್ಕೆ ಕರೆದೊಯ್ದು ಪರಿಶೀಲನೆ ನಡೆಸಿದ್ದಾರೆ. ಬ್ಲೂ-ರೇ ತಂತ್ರಜ್ಞಾನದಂತಹ ಸುಧಾರಿತ ತಂತ್ರಗಳನ್ನು ಬಳಸಿದ ತನಿಖಾಧಿಕಾರಿಗಳು, ಅಡುಗೆಮನೆಯಲ್ಲಿ ಬಿದ್ದ ರಕ್ತದ ಕಲೆ ಮತ್ತು ಶೌಚಾಲಯದ ಬಳಿಯ ಸಿಕ್ಕ ಉದ್ದನೆಯ ಕೂದಲನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ಅಪರಾಧದ ಸ್ಥಳವನ್ನು ಸ್ವಚ್ಛಗೊಳಿಸಲು ಬಳಸಲಾಗಿದೆ ಎಂದು ಶಂಕಿಸಲಾದ ಟಿಶ್ಯೂ ಪೇಪರ್ ಅನ್ನು ಸಹ ವಶಪಡಿಸಿಕೊಂಡು ವಿಧಿವಿಜ್ಞಾನ ವಿಶ್ಲೇಷಣೆಗೆ ಕಳುಹಿಸಲಾಗಿದೆ. ಕೊಲೆ ಆರೋಪಿ ಆತನೇ ಎಂದು ಅಧಿಕೃತ ಪತ್ತೆಗಾಗಿ ಪೊಲೀಸರು ಡಿಎನ್ಎ ಪರೀಕ್ಷೆಗಳನ್ನು ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಆರಂಭದಲ್ಲಿ ಪ್ರತಿಭಟಿಸಿದರೂ, ಗುರುಮೂರ್ತಿ ನಂತರ ಕೊಲೆಗೆ ಕಾರಣ ಏನು? ದೇಹವನ್ನು ನಾಶಮಾಡಲು ಏನೆಲ್ಲ ಮಾಡಿದೆ ಅನ್ನೋದನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ಜಗಳದ ಹಿಂದಿನ ಕಾರಣಗಳು: 13 ವರ್ಷಗಳ ಹಿಂದೆ ವಿವಾಹವಾದ ಗುರುಮೂರ್ತಿ ಮತ್ತು ವೆಂಕಟಮಾಧವಿ ಒಂದೇ ಗ್ರಾಮದವರು. ಮೂರು ವರ್ಷಗಳ ಹಿಂದೆ ಗುರುಮೂರ್ತಿ ಗ್ರಾಮದ ಯುವತಿಯೊಂದಿಗೆ ಸಲುಗೆಯಿಂದ ಇರುವ ಬಗ್ಗೆ ವೆಂಕಟಮಾಧವಿಗೆ ಗೊತ್ತಾಗಿತ್ತು. ಇದರಿಂದ ದಂಪತಿ ನಡುವೆ ಮನಸ್ತಾಪ ಶುರುವಾಗಿತ್ತು. ಸಂಬಂಧಿಕರಿಗೆ, ಸ್ನೇಹಿತರಿಗೆ, ಈ ವಿಚಾರ ಹಬ್ಬಿದ್ದರಿಂದ ವೆಂಕಟಮಾಧವಿ ತನ್ನ ಕುಟುಂಬದ ಗೌರವಕ್ಕೆ ಧಕ್ಕೆ ಆಗುತ್ತಿದೆ ಎಂದು ಗಂಡನನ್ನು ದೂಷಿಸಲು ಆರಂಭಿಸಿದ್ದಳು. ಜನವರಿ 15 ರಂದು ಇಬ್ಬರು ನಡುವೆ ಮತ್ತೆ ಜಗಳವಾಗಿತ್ತು. ಜಗಳ ವಿಕೋಪಕ್ಕೆ ಹೋಗಿದ್ದು ಸಿಟ್ಟಿನಲ್ಲಿ ಗುರುಮೂರ್ತಿ ಪತ್ನಿಯ ತಲೆಗೆ ಬಲವಾದ ಆಯುಧದಿಂದ ಹೊಡೆದಿದ್ದಾನೆ. ಏಟು ತಾಳಲಾರದೇ ಮಾಧವಿ ಸ್ಥಳದಲ್ಲೇ ಮೃತಪಟ್ಟಿದ್ದು, ಏನು ಮಾಡಬೇಕೆಂದು ಗೊತ್ತಾಗದೇ ಗುರುಮೂರ್ತಿ 6 ಗಂಟೆಗಳ ಕಾಲ ಮೃತದೇಹದ ಮುಂದೆ ಕುಳಿತಿದ್ದಾನೆ.
ಸಿನಿಮಾದಲ್ಲಿ ತೋರಿಸಿದಂತೆ ಮೃತದೇದ ವಿಲೇವಾರಿ: ಒಟಿಟಿಯಲ್ಲಿ ನೋಡಿದ ವೆಬ್ ಸರಣಿಯ ಪಾತ್ರಗಳಂತೆ ಮೃತದೇಹವನ್ನು ವಿಲೇವಾರಿ ಮಾಡಲು ಮುಂದಾಗಿದ್ದಾನೆ. ಸಿನಿಮಾದಲ್ಲಿ ತೋರಿಸಿದಂತೆ ದೇಹವನ್ನು ಶೌಚಾಲಯಕ್ಕೆ ತೆಗೆದುಕೊಂಡು ಹೋಗಿ ತುಂಡುಗಳಾಗಿ ಕತ್ತರಿಸಿದ್ದಾನೆ. ನಂತರ ಹೀಟರ್ ಬಳಸಿ ಬಕೆಟ್ ನೀರು ಬಿಸಿ ಮಾಡಿ ಮಾಂಸದ ತುಂಡುಗಳನ್ನು ಅದರೊಳಗೆ ಹಾಕಿದ್ದಾನೆ. ತುಂಡಾದ ಮಾಂಸವನ್ನು ಮೂಳೆಗಳಿಂದ ಬೇರ್ಪಡಿಸಿದ್ದಾರೆ. ಮಾಂಸ ಮತ್ತು ಮೂಳೆಗಳನ್ನು ಒಂದು ದೊಡ್ಡ ಕುಕ್ಕರ್‌ನಲ್ಲಿ ಬೇಯಿಸಿದ್ದಾನೆ. ಚೆನ್ನಾಗಿ ಬೇಯಿಸಿದ ಬಳಿಕ ಒಣಗಿಸಿ, ಮಾಂಸವನ್ನು ಸುಟ್ಟು ಹಾಕಿದ್ದಾನೆ. ಅಲ್ಲದೇ, ಮೂಳೆಗಳನ್ನು ಚೆನ್ನಾಗಿ ಪುಡಿ ಮಾಡಿದ್ದಾನೆ. ಇದಾದ ಬಳಿಕ ಬೂದಿಯನ್ನು ಒಳಚರಂಡಿ ಮ್ಯಾನ್‌ಹೋಲ್‌ನಲ್ಲಿ ಬೆರೆಸಿ ಉಳಿದ ಮೂಳೆಯ ಪುಡಿಯನ್ನು ಹತ್ತಿರದ ಕೊಳದಲ್ಲಿ ಎಸೆದಿದ್ದಾನೆ.
ದೇಹವನ್ನು ಕತ್ತರಿಸಿದ ಬಳಿಕ ಕೋಣೆಯನ್ನು ಸ್ವಚ್ಛಗೊಳಿಸಿದ್ದಾನೆ. 17ರಂದು ಮಾಧವಿಯ ಪಾಲಕರಿಗೆ ಕರೆ ಮಾಡಿ, ತನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು, ಸಣ್ಣ ಜಗಳದಿಂದಾಗಿ ಆಕೆ ಮನೆ ಬಿಟ್ಟು ಹೋಗಿದ್ದಾಳೆಂದು ಕತೆ ಕಟ್ಟಿದ್ದಲ್ಲದೇ ಮಾಧವಿ ಪಾಲಕರ ಜತೆಗೆ ತೆರಳಿ ದೂರು ಸಹ ದಾಖಲಿಸಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಗುರುಮೂರ್ತಿಯ ಮೇಲೆ ಅನುಮಾನ ಮೂಡಿದ್ದು, ಗುರುಮೂರ್ತಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ನಿಜವಾದ ಕತೆ ಬಾಯ್ಬಿಟ್ಟಿದ್ದಾನೆ. ಪತ್ನಿ ಸಾವಿನ ಬಳಿಕ ತನ್ನ ಮಕ್ಕಳನ್ನು ನೋಡಿಕೊಳ್ಳಲು ಒಬ್ಬಳು ಬೇಕು ಎಂಬ ಕಾರಣದಿಂದ ಮತ್ತೊಂದು ಮದುವೆಯಾಗಲು ಯೋಜಿಸಿದ್ದ ಎಂಬುವುದು ತನಿಖೆಯಿಂದ ಗೊತ್ತಾಗದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳಿಂದ ಡಿಎನ್‌ಎ ಪರೀಕ್ಷೆ: ಆರೋಪಿಯ ನಿವಾಸವನ್ನು ಪರಿಶೀಲಿಸಿದ್ದ ತನಿಖಾ ತಂಡ ಮತ್ತು ವಿಧಿವಿಜ್ಞಾನ ತಂಡಗಳು, ಮನೆಯಿಂದ ಬಕೆಟ್, ವಾಟರ್ ಹೀಟರ್ ಮತ್ತು ಕೆಲವು ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಿವೆ. ಅವುಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇಲ್ಲಿಯವರೆಗೆ ಸಂಗ್ರಹಿಸಿದ ಮಾಹಿತಿಯನ್ನು ಒಟ್ಟುಗೂಡಿಸುವ ಪ್ರಯತ್ನ ನಡೆಯುತ್ತಿವೆ. ಮಾಧವಿಯ ಮೂಳೆಗಳನ್ನು ತುಂಡುಗಳಾಗಿ ಕತ್ತರಿಸಿ ಕೊಳಕ್ಕೆ ಎಸೆದಿದ್ದರೆ, ಅದನ್ನು ಯಾರು ಮಾಡಿದ್ದಾರೆಂದು ಸಾಬೀತುಪಡಿಸುವುದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ. ಘಟನಾ ಸ್ಥಳದಲ್ಲಿ ಕಂಡುಬಂದಿರುವ ಅವಶೇಷಗಳನ್ನು ಮಾನವ ಅವಶೇಷಗಳೇ ಎಂದು ವೈಜ್ಞಾನಿಕವಾಗಿ ಸಾಬೀತುಪಡಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಅವು ಮಾಧವಿಯ ಅವಶೇಷಗಳೇ ಎಂದು ಖಚಿತಪಡಿಸಲು, ಆಕೆಯ ಪೋಷಕರು ಮತ್ತು ಮಕ್ಕಳಿಂದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಬೇಕು. ರಾಚಕೊಂಡ ಸಿಪಿ ಸುಧೀರ್ ಬಾಬು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.