ಕೋಲ್ಕತ್ತಾ(ಪಶ್ಚಿಮ ಬಂಗಾಳ): ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಎದುರಿಸಬೇಕಾಯಿತು. ಭಾರತ ತಂಡಕ್ಕೆ ತನ್ನದೇ ನೆಲದಲ್ಲಿ ಒಂದೇ ಒಂದು ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಸೋಲಿನ ನಂತರ ಮುಖ್ಯ ಕೋಚ್ ಗೌತಮ್ ಗಂಭೀರ್ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.
ಈ ಸಂಬಂಧ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ರೋಹಿತ್ ಶರ್ಮಾ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಮುಂಬೈನಲ್ಲಿ ಆರು ಗಂಟೆಗಳ ಸುದೀರ್ಘ ಸಭೆ ನಡೆಸಿದ್ದಾರೆ. ಇಲ್ಲಿ ಗೌತಮ್ ಗಂಭೀರ್ ಅವರ ಕೋಚಿಂಗ್ ಬಗ್ಗೆ, ಪಿಚ್‌ಗಳ ತಯಾರಿ, ಬೌಲರ್ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ಕುರಿತು ಚರ್ಚೆ ನಡೆದಿದೆ.
ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಗಂಭೀರ್‌ಗೆ ಡೆಡ್ಲೈನ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ 'ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 5 ಟೆಸ್ಟ್ ಪಂದ್ಯಗಳಲ್ಲಿ ಭಾರತ ಕಳಪೆ ಪ್ರದರ್ಶನ ನೀಡಿದರೆ, ಬಿಸಿಸಿಐ ಟೆಸ್ಟ್ ತಂಡಕ್ಕೆ ಬೇರೆ ಕೋಚ್ ಆಯ್ಕೆಯ ಬಗ್ಗೆ ಯೋಚಿಸಬಹುದು ಎಂದು ಟೀಂ ಇಂಡಿಯಾ ವಿಶ್ವಾಸಾರ್ಹ ಮೂಲವೊಂದು ಈಟಿವಿ ಭಾರತಕ್ಕೆ ತಿಳಿಸಿದೆ.