ICC Chairman Jay Saha Salaray: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿಯಾಗಿದ್ದ ಜಯ್ ಶಾ ಇದೀಗ ICC ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿಕೊಂಡಿದ್ದಾರೆ. ಅವರು ಭಾನುವಾರ (ಇಂದು) ಐಸಿಸಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದು 2 ವರ್ಷಗಳ ಕಾಲ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
35 ವರ್ಷದ ಜಯ್ ಶಾ ಐಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಇದಷ್ಟೇ ಅಲ್ಲದೇ ಐಸಿಸಿ ಅಧ್ಯಕ್ಷಗಿರಿ ವಹಿಸಿಕೊಂಡ ಐದನೇ ಭಾರತೀಯರಾಗಿದ್ದಾರೆ. ಈ ಹಿಂದೆ ಜಗಮೋಹನ್ ದಾಲ್ಮಿಯಾ (1997-2000), ಶರದ್ ಪವಾರ್ (2010-12), ಎನ್ ಶ್ರೀನಿವಾಸನ್ (2014-15) ಮತ್ತು ಶಶಾಂಕ್ ಮನೋಹರ್ (2015-2020) ಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಜಯ್ ಶಾ ಜರ್ನಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರರಾಗಿರುವ ಜಯ್ ಶಾ 2009ರಲ್ಲಿ ಕ್ರಿಕೆಟ್ ಆಡಳಿತ ವ್ಯವಹಾರಗಳ ಮೂಲಕ ತಮ್ಮ ಆಳ್ವಿಕೆಯನ್ನು ಪ್ರಾರಂಭಿಸಿದರು. ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ನ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಶಾ, ಅಹಮದಾಬಾದ್‌ನಲ್ಲಿ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಬಳಿಕ 2019ರಲ್ಲಿ ಬಿಸಿಸಿಐ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ನಂತರ ಏಷ್ಯನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಮತ್ತು ಐಸಿಸಿ ಆರ್ಥಿಕ ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಏತನ್ಮಧ್ಯೆ, ಗ್ರೆಗ್ ಬಾರ್ ಕ್ಲೇ ಅವರು ನವೆಂಬರ್ 2020 ರಿಂದ ICC ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಇದೀಗ ಬಾರ್ ಕ್ಲೇ ಸ್ಥಾನಕ್ಕೆ ಜಯ್ ಶಾ ನೇಮಕ ಆಗಿದ್ದಾರೆ.