Virendra Sehwag 46th Birthday: ವೀರೇಂದ್ರ ಸೆಹ್ವಾಗ್. ಈ ಹೆಸರು ಕೇಳದ ಕ್ರಿಕೆಟ್ ಅಭಿಮಾನಿಗಳಿದ್ದಾರೆಯೇ?. ಟೆಸ್ಟ್ ಕ್ರಿಕೆಟ್‌ನಲ್ಲೂ ವೀರೂ ಟಿ20 ಶೈಲಿಯಲ್ಲೇ ಬ್ಯಾಟ್ ಬೀಸುತ್ತಿದ್ದರು. ಬಿರುಸಿನ ಬ್ಯಾಟಿಂಗ್ ಮೂಲಕವೇ ಎದುರಾಳಿ ಬೌಲರ್ಗಳಲ್ಲಿ ಭಯ ಹುಟ್ಟಿಸುವುದು ಇವರ ಅಭ್ಯಾಸ. ತಮ್ಮ ನಿರ್ಭೀತ ಬ್ಯಾಟಿಂಗ್‌ನಿಂದ ಭಾರತವನ್ನು ಹಲವು ಬಾರಿ ಗೆಲುವಿನತ್ತ ಮುನ್ನಡೆಸಿದ್ದಾರೆ. ಇಂಥ ದಿಗ್ಗಜ ಬ್ಯಾಟರ್‌ಗಿಂದು 46ನೇ ಹುಟ್ಟುಹಬ್ಬ!.
ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟವಾಡುವ ಸೆಹ್ವಾಗ್ 1999ರಿಂದ 2013ರವರೆಗೆ 14 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ.
ಟೆಸ್ಟ್‌ನಲ್ಲಿ 2 ತ್ರಿಶತಕ:ಭಾರತದ ಅನೇಕ ದಿಗ್ಗಜ ಬ್ಯಾಟರ್‌ಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆಗಳನ್ನು ಬರೆದಿದ್ದಾರೆ. ಆದರೆ, ಇದುವರೆಗೂ ಟೆಸ್ಟ್‌ನಲ್ಲಿ ತ್ರಿಶತಕ ಸಿಡಿಸುವಲ್ಲಿ ಇಬ್ಬರು ಮಾತ್ರ ಯಶಸ್ವಿಯಾಗಿದ್ದಾರೆ. ಅವರೇ ಸೆಹ್ವಾಗ್ ಮತ್ತು ಕರುಣ್ ನಾಯರ್. ಭಾರತದ ಪರ ಮೊದಲ ತ್ರಿಶತಕ ಬಾರಿಸಿದವರು ವೀರೇಂದ್ರ ಸೆಹ್ವಾಗ್ ಆಗಿದ್ದಾರೆ. 2004ರಲ್ಲಿ ಮುಲ್ತಾನ್‌ನಲ್ಲಿ ಪಾಕಿಸ್ತಾನದ ವಿರುದ್ಧ 375 ಎಸೆತಗಳಲ್ಲಿ 309ರನ್ ಗಳಿಸಿದ್ದರು.
2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೆನ್ನೈನಲ್ಲಿ 304 ಎಸೆತಗಳಲ್ಲಿ 319 ರನ್‌ಗಳೊಂದಿಗೆ ಬಿರುಸಿನ ತ್ರಿಶತಕ ಸಿಡಿಸಿದ್ದರು. ಆ ಸಮಯದಲ್ಲಿ ಎರಡು ತ್ರಿಶತಕಗಳನ್ನು ಸಿಡಿಸಿದ ಏಕೈಕ ಭಾರತೀಯ ಆಟಗಾರರಾಗಿದ್ದರು. 2016ರಲ್ಲಿ ಕರುಣ್ ನಾಯರ್ ತ್ರಿಶತಕ ಬಾರಿಸಿ ಈ ಪಟ್ಟಿ ಸೇರಿದ್ದಾರೆ.
ಕಡಿಮೆ ಎಸೆತಗಳಲ್ಲಿ ಟ್ರಿಪಲ್ ಸೆಂಚುರಿ:ಸೆಹ್ವಾಗ್ 2008ರಲ್ಲಿ ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 278 ಎಸೆತಗಳಲ್ಲಿ ತ್ರಿಶತಕ ಗಳಿಸಿದ್ದರು. ಹಾಗಾಗಿ, ಟೆಸ್ಟ್‌ನಲ್ಲಿ ಅತಿ ವೇಗದ ತ್ರಿಶತಕ ಬಾರಿಸಿದ ವಿಶ್ವದಾಖಲೆಯೂ ಇವರ ಹೆಸರಲ್ಲಿದೆ. ಈ ದಾಖಲೆ ಈಗಲೂ ತಮ್ಮದೇ ಹೆಸರಿನಲ್ಲಿದ್ದು, ಇದನ್ನೂ ಮುರಿಯುವುದು ಕಷ್ಟವಾಗಿದೆ.