ಧರ್ಮಶಾಲಾ:ಇಂಗ್ಲೆಂಡ್ ಮತ್ತು ಭಾರತದ ನಡುವಿನ 5ನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ವಿಶ್ವದ ಸುಂದರ ಕ್ರೀಡಾಂಗಣಗಳಲ್ಲಿ ಒಂದಾದ ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಇಂದು (ಗುರುವಾರ) ಆರಂಭವಾಯಿತು. ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ. ಭಾರತದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಇಂಗ್ಲೆಂಡ್ನ ಹಿರಿಯ ಬ್ಯಾಟರ್ ಜಾನಿ ಬೈರ್ಸ್ಟೋವ್ಗೆ ಇದು 100ನೇ ಟೆಸ್ಟ್ ಆಗಿರುವುದು ವಿಶೇಷ.
ಸರಣಿಯನ್ನು 3-1 ರಲ್ಲಿ ತನ್ನ ಕೈವಶ ಮಾಡಿಕೊಂಡಿರುವ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಮೊದಲ ಸ್ಥಾನದಲ್ಲಿದ್ದು, ಅಂಕಗಳನ್ನು ಹೆಚ್ಚಿಸಿಕೊಳ್ಳಲು ಆಡಲಿದೆ. ಇನ್ನು ಪ್ರವಾಸಿ ಇಂಗ್ಲೆಂಡ್ ಮೊದಲ ಪಂದ್ಯವನ್ನು ಗೆದ್ದ ಬಳಿಕ ಸತತ ಮೂರರಲ್ಲಿ ಸೋತು ಸರಣಿ ಸೋಲಿನ ನಿರಾಸೆ ಅನುಭವಿಸಿದೆ. ಅಂತಿಮ ಪಂದ್ಯದಲ್ಲಿ ಗೆದ್ದು ಸರಣಿಯ ಅಂತರವನ್ನು ಕಡಿಮೆ ಮಾಡಿಕೊಳ್ಳಲು ಹೋರಾಡಲಿದೆ.
ಕನ್ನಡಿಗ ಪಡಿಕ್ಕಲ್ ಪದಾರ್ಪಣೆ:ಒಂದು ವಾರಕ್ಕೂ ಅಧಿಕ ವಿಶ್ರಾಂತಿ ಪಡೆದಿರುವ ಉಭಯ ತಂಡಗಳ ಆಟಗಾರರು ಹೊಸ ಹುರುಪಿನಲ್ಲಿ ಮೈದಾನಕ್ಕೆ ಇಳಿದಿದ್ದಾರೆ. ರಣಜಿಯಲ್ಲಿ ರಾಶಿ ರಾಶಿ ರನ್ ಕಲೆ ಹಾಕಿರುವ ಕನ್ನಡಿಗ ದೇವದತ್ ಪಡಿಕ್ಕಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಆರಂಭಿಸಿದರು. ಅಭ್ಯಾಸದ ವೇಳೆ ರಜತ್ ಪಾಟೀದಾರ್ ಪಾದದ ಗಾಯಕ್ಕೆ ತುತ್ತಾದ ಕಾರಣ ಪಡಿಕ್ಕಲ್ಗೆ ಅವಕಾಶ ನೀಡಲಾಗಿದೆ.
ಮಾರ್ಚ್ 6 ರಂದು ತರಬೇತಿ ನಡೆಸುತ್ತಿದ್ದ ವೇಳೆ ಪಾಟೀದಾರ್ ಎಡ ಪಾದಕ್ಕೆ ಗಾಯವಾಗಿದೆ. ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದು, ಅವರ ಬದಲಿಗೆ ದೇವದತ್ ಪಡಿಕ್ಕಲ್ ಕಣಕ್ಕಿಳಿಯಲಿದ್ದಾರೆ ಎಂದು ಬಿಸಿಸಿಐ ಪಂದ್ಯ ಆರಂಭಕ್ಕೂ ಮುನ್ನ ಮಾಹಿತಿ ನೀಡಿದೆ.