ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ 2004ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವೊಂದರ ಇನ್ನಿಂಗ್ಸ್‌ನಲ್ಲಿ 400 ರನ್ ಬಾರಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ಈ ಬೃಹತ್ ದಾಖಲೆಗೆ ಎರಡು ದಶಕಗಳಾಗಿದ್ದು, ಆ ಬಳಿಕ ವಿಶ್ವದ ಯಾವೊಬ್ಬ ಬ್ಯಾಟರ್ ಕೂಡ ಅದನ್ನು ಮುರಿಯಲಾಗಿಲ್ಲ. ತಮ್ಮ ದಾಖಲೆ ಕುರಿತಂತೆ ಸ್ವತಃ ಲಾರಾ ಅವರೇ ಕೆಲ ಆಸಕ್ತಿದಾಯಕ ಮಾತುಗಳನ್ನಾಡಿದ್ದಾರೆ.
ಲಾರಾ ಬ್ಯಾಟ್ನಿಂದ ಮೂಡಿಬಂದ ದಾಖಲೆಯು ಕಳೆದ 20 ವರ್ಷಗಳಿಂದಲೂ ಅಜರಾಮರವಾಗಿದ್ದು, ಜಗತ್ತಿನ ಯಾವ ಬ್ಯಾಟರ್ ಕೂಡ ಅದರ ಸಮೀಪ ಕೂಡ ತಲುಪಿಲ್ಲ. ಈ ಕುರಿತಂತೆ ಮಾತನಾಡಿರುವ ಅವರು, ಈ ದಾಖಲೆ ಮುರಿಯಲು ಯುವ ಆಟಗಾರರ ಆಕ್ರಮಣಕಾರಿ ಕ್ರಿಕೆಟ್‌ನಿಂದ ಮಾತ್ರ ಸಾಧ್ಯ ಎಂದು ಇತ್ತೀಚಿನ ಪಾಡ್‌ಕಾಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ''ಟೀಂ ಇಂಡಿಯಾದ ಯುವ ಬ್ಯಾಟರ್ಗಳಾದ ಶುಭಮನ್ ಗಿಲ್ ಮತ್ತು ಯಶಸ್ವಿ ಜೈಶ್ವಾಲ್ ಅವರು 400 ರನ್ ಮೀರುವ ಸಾಮರ್ಥ್ಯ ಹೊಂದಿದ್ದಾರೆ'' ಎಂದು ಲಾರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
''1970 ಮತ್ತು 80ರ ದಶಕಗಳಲ್ಲಿ ವಿವ್ ರಿಚರ್ಡ್ಸ್ ಮತ್ತು ಗಾರ್ಡನ್ ಗ್ರೀನ್‌ಡೇಲ್‌ರಂತಹ ಆಕ್ರಮಣಕಾರಿ ಬ್ಯಾಟರ್ಗಳಿಂದಲೂ ಕೂಡ ಸರ್ ಗಾರ್ಫೀಲ್ಡ್ ಸೋಬರ್ಸ್ ಅವರ 365 ರನ್‌ಗಳ ದಾಖಲೆಯನ್ನು ಅಳಿಸಲಾಗಲಿಲ್ಲ. ಆದರೆ, ನಮ್ಮ ಪೀಳಿಗೆಯಲ್ಲಿ ವೀರೇಂದ್ರ ಸೆಹ್ವಾಗ್, ಕ್ರಿಸ್ ಗೇಲ್, ಇಂಜಮಾಮ್ ಉಲ್ ಹಕ್ ಮತ್ತು ಸನತ್ ಜಯಸೂರ್ಯ ಅವರಂತವರು ಟೆಸ್ಟ್‌ನಲ್ಲಿ ಸುಲಭವಾಗಿ 300 ರನ್ ಬಾರಿಸಿದರು. ಅಲ್ಲದೇ ಇದೇ ರೀತಿಯಲ್ಲಿ ಬ್ಯಾಟ್ ಮಾಡುವ ಹುಡುಗರು ಹಲವು ದಾಖಲೆಗಳನ್ನು ಬರೆಯುತ್ತಾರೆ ಎಂಬ ವಿಶ್ವಾಸ ನನಗಿದೆ. ಆಕ್ರಮಣಕಾರಿ ಕ್ರಿಕೆಟ್‌ನಿಂದ ಮಾತ್ರ ಇದು ಸಾಧ್ಯ. ಭಾರತ ತಂಡದಲ್ಲಿನ ಗಿಲ್, ಜೈಶ್ವಾಲ್, ಇಂಗ್ಲೆಂಡ್‌ನ ಜಾಕ್ ಕ್ರಾಲಿ ಮತ್ತು ಹ್ಯಾರಿ ಬ್ರೂಕ್ ಪ್ರಸ್ತುತ ಇಂತಹ ಆಕ್ರಮಣಕಾರಿ ಕ್ರಿಕೆಟ್ ಆಡುತ್ತಿದ್ದಾರೆ. ಪರಿಸ್ಥಿತಿಯು ಅವರಿಗೆ ಅನುಕೂಲಕರವಾಗಿದ್ದರೆ, ಭವಿಷ್ಯದಲ್ಲಿ ಅವರು ಖಂಡಿತವಾಗಿಯೂ ಈ ದಾಖಲೆಗಳನ್ನು ಮುರಿಯುತ್ತಾರೆ'' ಎಂದು ಲಾರಾ ಹೇಳಿದರು.
ಲಾರಾ ಹೆಸರಿನಲ್ಲಿನ ದಾಖಲೆ:2004ರಲ್ಲಿ ಆಂಟಿಗುವಾದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್‌ನಲ್ಲಿ ಲಾರಾ ಗಳಿಸಿದ ಅಜೇಯ 400 ರನ್ ದಾಖಲೆಯು ಕ್ರಿಕೆಟ್ ಪ್ರಿಯರ ಮನದಲ್ಲಿ ಇಂದಿಗೂ ಹಚ್ಚಹಸಿರಾಗಿದೆ. ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು. ಇದಲ್ಲದೇ, ಲಾರಾ ಖಾತೆಯಲ್ಲಿ ಮತ್ತೊಂದು ವಿಶ್ವದಾಖಲೆ ಹೊಂದಿದ್ದಾರೆ. ಅದೇನೆಂದರೆ, 1994ರಲ್ಲಿ ಲಾರಾ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಸ್ಕೋರ್ ದಾಖಲೆ ರಚಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವಾರ್ವಿಕ್‌ಷೈರ್ ಅನ್ನು ಪ್ರತಿನಿಧಿಸುತ್ತಿದ್ದ ಲಾರಾ ಡರ್ಹಾಮ್ ವಿರುದ್ಧ 501 ರನ್ ಗಳಿಸುವ ಮೂಲಕ ವಿಶ್ವದಾಖಲೆ ಬರೆದಿದ್ದರು. ಈ ಪಂದ್ಯದ ಮೂಲಕ ಹನೀಫ್ ಮೊಹಮ್ಮದ್ (499 ರನ್) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದರು.
ಇದನ್ನೂ ಓದಿ:ಶುಭ್ಮನ್ ಗಿಲ್ ಅರ್ಧಶತಕ: ಜಿಂಬಾಬ್ವೆ ವಿರುದ್ಧ 3ನೇ ಟಿ20ಯಲ್ಲಿ ಯುವ ಭಾರತಕ್ಕೆ ಮತ್ತೊಂದು ಜಯ - IND VS ZIM 3rd T20